ಅಕ್ರಮ ಮದ್ಯ ಮಾರಾಟಕ್ಕೆ ಇಲ್ಲ ಕಡಿವಾಣ
ಬಂಗಾರಪೇಟೆ: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದ್ದರೂ ಅಬಕಾರಿ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದರಿಂದ ಹಳ್ಳಿಗಳಲ್ಲಿ ಕುಡುಕರ ಹಾವಳಿ ಏರಿಕೆಯಾಗಿ ಗ್ರಾಮಗಳು ಜಗಳ ಕೇಂದ್ರಗಳಾಗಿವೆ.
ಪರವಾನಿಗೆ ಪಡೆದಿರುವ ಮದ್ಯದಂಡಿಗಳ ಮಾಲೀಕರು ಹಳ್ಳಿಗಳಲ್ಲಿರುವ ಚಿಲ್ಲರೆ ಅಂಗಡಿಗಳಲ್ಲಿ ಒಡಂಬಡಿಕೆ ಮಾಡಿಕೊಂಡು ಮದ್ಯ ಪೂರೈಸಿ ಹಳ್ಳಿಗಳ ವಾತಾರವಣ ಹದಗೆಡುವಂತೆ ಮಾಡಿದ್ದಾರೆ.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದರೂ ಮದ್ಯ ಪೂರೈಕೆಯಲ್ಲಿ ಕೊರತೆ ಇಲ್ಲವಾಗಿದೆ. ಕಾನೂನು ಬಾಹಿರವಾಗಿ ಪ್ರತಿಹಳ್ಳಿಯಲ್ಲಿಯೂ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಮಹಿಳೆಯರಿಗೆ ಕಿರಿಕಿರಿ ಉಂಟಾಗಿದೆ. ಪ್ರತಿ ಗ್ರಾಮದ ಚಿಲ್ಲರೆ ಅಂಗಡಿಯಲ್ಲಿ ಅಕ್ರಮ ಮದ್ಯ ದೊರೆಯುತ್ತಿರುವುದರಿಂದ ಅಗ್ಗದ ಪಡಿತರ ಅಕ್ಕಿ ಮಾರಾಟ ಮಾಡಿ ಕುಡಿಯುತ್ತಿದ್ದಾರೆ ಎಂದು ಮಹಿಳೆಯರು ಶಾಸಕ ಎಸ್.ಎನ್. ನಾರಾಯಣಸ್ವಾಮಿಗೆ ಇತ್ತೀಚಿಗೆ ಅವರು ಗ್ರಾಮ ಪ್ರವಾಸ ವೇಳೆ ದೂರಿದರು. ಇದರಿಂದ ಅಬಕಾರಿ ಮತ್ತು ಲಾಟರಿ ನಿಷೇದ ದಳದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಕೆಂಡಾಮಂಡಲರಾಗಿ ಅಕ್ರಮ ಮದ್ಯ ಮಾರಾಟಕ್ಕೆ ತಡೆ ನೀಡುವಂತೆ ಎಚ್ಚರಿಕೆ ನೀಡಿದ್ದರಾದರೂ ಇನ್ನೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
ಸರ್ಕಾರ ನಿಗದಿಪಡಿಸಿದ ಸಮಯಕ್ಕಿಂತ ಮುಂಚಿತವಾಗಿ ಬಾರ್ಗಳ ಬಾಗಿಲು ತೆರೆದು ರಾತ್ರಿ 12ಗಂಟೆಯಾದರೂ ಬಾಗಿಲು ಮುಚ್ಚುವುದಿಲ್ಲ. ಕಾನೂನು ಉಲ್ಲಂಘಿಸಿ ವಹಿವಾಟು ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಕಂಡು ಕಾಣದಂತೆ ವರ್ತಿಸುತ್ತಿರುವುದರಿಂದ ಹಳ್ಳಿಗಳಲ್ಲಿ ಮದ್ಯದ ಗಮಲು ಹೆಚ್ಚಾಗಿದೆ.