ಅಕ್ರಮ ಮರಳುಗಾರಿಕೆ ತಡೆಯೋರೇ ಇಲ್ಲ!
ಚಿಂತಾಮಣಿ: ಸಿ.ದೊಡ್ಡಹಳ್ಳಿ ಗ್ರಾಮದ ಕೆರೆಯಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದರೂ ತಾಲೂಕು ಆಡಳಿತ ಮೌನವಾಗಿರುವ ಬಗ್ಗೆ ಗ್ರಾಮಸ್ಥರು ತೀವ್ರವಾಗಿ ಖಂಡಿಸಿದ್ದಾರೆ.
ತಾಲೂಕಿನ ಸಿ.ದೊಡ್ಡಹಳ್ಳಿ ಗ್ರಾಮದ ಕೆರೆ ಅಂಗಳದಲ್ಲಿ ದಿನ ನಿತ್ಯ ರಾತ್ರಿ ವೇಳೆ ಹಲವು ಮರಳುಗಳ್ಳರು ಟ್ರ್ಯಾಕ್ಟರ್ಗಳ ಮುಖಾಂತರ ತುಂಬಿಸಿಕೊಂಡು ನಗರಕ್ಕೆ ಮಾರಾಟ ಮಾಡುತ್ತಿದ್ದರೂ ತಾಲೂಕು ಆಡಳಿತ ಕಂಡು ಕಾಣದಂತೆ ಇರುವ ಕಾರ್ಯವೈಖರಿ ಬಗ್ಗೆ ಸಿ.ದೊಡ್ಡಹಳ್ಳಿ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂತರ್ಜಲ ಮಟ್ಟ ಕುಸಿದು ಜನಸಾಮಾನ್ಯರಿಗೆ ನೀರಿನ ಸಮಸ್ಯೆ ಎದುರಾಗಿದ್ದರೂ ಹಲವರು ಕೆರೆಯಲ್ಲಿ ಚಿನ್ನದಂತಹ ಮರಳನ್ನು ಜೆಸಿಬಿ ಯಂತ್ರದ ಮೂಲಕ ಹೊರತೆಗೆದು ಮರಳು ಮಾಫಿಯಾದಲ್ಲಿ ತೊಡಗಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.