ಅವ್ಯವಸ್ಥೆ ಆಗರ ಅಣ್ಣೆಹಳ್ಳಿ ವಿದ್ಯಾರ್ಥಿ ನಿಲಯ
ಕೋಲಾರ: ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿ ನಿಲಯಗಳು ಬಡ ದಲಿತ ಮಕ್ಕಳಿಗೆ ವರದಾನವಾಗುವ ಬದಲು ಮತ್ತಷ್ಟು ಸಮಸ್ಯೆಗಳಿಗೆ ಕಾರಣೀಭೂತವಾಗುತ್ತಿದೆ.
ಹೌದು. ಕೋಲಾರ ತಾಲೂಕಿನ ಅಣ್ಣೆಹಳ್ಳಿ ಗ್ರಾಮದಲ್ಲಿ ದಲಿತ ಮಕ್ಕಳಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಾರಂಭಿಸಿರುವ ವಿದ್ಯಾರ್ಥಿ ನಿಲಯವನ್ನು ಓಮ್ಮೆ ಗಮನಿಸಿದರೆ ಇಲಾಖೆಯ ಉದ್ದೇಶಗಳನ್ನು ಅಲ್ಲಿನ ಮೇಲ್ವಿಚಾರಕರು ಹಾಗೂ ಊರಿನ ಜನಪ್ರತಿನಿಧಿಗಳು ಯಾವ ರೀತಿಯಲ್ಲಿ ಹದಗೆಡಿಸುತ್ತಿದ್ದಾರೆಂಬುದು ಗೊತ್ತಾಗುತ್ತದೆ.
ವಿದ್ಯಾರ್ಥಿ ನಿಲಯ ಸಮಸ್ಯೆಗಳ ಆಗರವಾಗಿದ್ದು, ಕನಿಷ್ಠ ಸೌಲಭ್ಯಗಳಿಂದ ವಂಚಿತವಾಗಿರುವುದರಿಂದ ವಿದ್ಯಾರ್ಥಿಗಳು ನಿಲಯಕ್ಕೆ ಬರುತ್ತಿಲ್ಲ. ಕುಡಿಯುವುದಕ್ಕೆ ಮತ್ತು ದಿನಬಳಕೆಗೆ ನೀರನ್ನು ವಿದ್ಯಾರ್ಥಿಗಳೇ ಪ್ರತಿದಿನ ಗ್ರಾಮದಿಂದ ಪ್ಲಾಸ್ಟಿಕ್ ಬಿಂದಿಗೆಯಲ್ಲಿ ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿ ನಿಲಯದ ಶೌಚಾಲಯ ಗಬ್ಬುನಾರುತ್ತಿದೆ. ಇಲಾಖೆಯ ವತಿಯಿಂದ ಸರಬರಾಜು ಆಗಿರುವ ಹಾಸಿಗೆಗಳು ಬಳಕೆಗೆ ಬಾರದೆ ಮೂಲೆ ಸೇರಿದೆ. ಸ್ವಚ್ಛತೆ ಇಲ್ಲದೇ ಇರುವುದರಿಂದ ನೊಣಗಳ ಕಾಟ, ಸೊಳ್ಳೆಗಳ ಹಾವಳಿ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ನೆಮ್ಮದಿಗೆ ಭಂಗ ಉಂಟಾಗಿದೆ.
ನಿಲಯಕ್ಕೆ ಅಳವಡಿಸಿರುವ ಪಂಪು ಮತ್ತು ಮೋಟರ್ ಹಾಳಾಗಿದ್ದರೂ ದುರಸ್ತಿ ಮಾಡಿಸಿಲ್ಲ. ರಾತ್ರಿ ಹೊತ್ತು ವಿದ್ಯುದ್ದೀಪಗಳು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನಿಲಯದಲ್ಲಿ ತಂಗುತ್ತಿಲ್ಲ. ಫ್ಯಾನ್ ಇದ್ದರೂ ತಿರುಗುವುದಿಲ್ಲ, ಫ್ಯಾನ್ ರೆಕ್ಕೆಗಳು ಡೊಂಕಾಗಿದೆ, ಗೋಡೆಗಳ ಮೇಲೆ ಅಳವಡಿಸಿರುವ ಸ್ವೀಚ್ ಬೋರ್ಡ್ಗಳು ಮುರಿದು ಹೋಗಿದೆ, ನಿಲಯದ ಆವರಣದಲ್ಲಿ ನೀರು ಮತ್ತು ನಿರ್ವಹಣೆ ಇಲ್ಲದೆ ಗಿಡಗಳು ಒಣಗುತ್ತಿವೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ನಿಲಯದ ಪ್ರಭಾರಿ ಮೇಲ್ವಿಚಾರಕ ನಾರಾಯಣಸ್ವಾಮಿ ತಮಗೇನು ತಿಳಿಯದಂತೆ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಉಮಾ ಅವರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆಯಾಗುತ್ತಿರುವುದನ್ನು ಸರಿಪಡಿಸಬೇಕು. ಕನಿಷ್ಠ ಸೌಲಭ್ಯಗಳನ್ನು ಒದಗಿಸಿ, ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.