ಕೌಶಲ್ಯ ತರಬೇತಿ ಪಡೆಯಲು ಮಹಿಳೆಯರಿಗೆ ಸಲಹೆ
ಕೋಲಾರ: ಮಹಿಳೆಯರು ಕುಟುಂಬ ಮುನ್ನಡೆಸಲು, ಆರ್ಥಿಕವಾಗಿ ಸಬಲರಾಗಲು ಮಹಿಳಾ ಸಂಘಗಳ ಮುಖಾಂತರ ಉಳಿತಾಯ ಮಾಡುವುದು, ಅವಶ್ಯಕತೆಗೆ ತಕ್ಕಂತೆ ಸಾಲ ಪಡೆಯುವುದು ಹಾಗೂ ಇತರೆ ಕೌಶಲ್ಯ ತರಬೇತಿಗಳನ್ನು ಪಡೆದು ಜೀವನದಲ್ಲಿ ಉತ್ತಮ ಮಟ್ಟಕ್ಕೆ ಬರಬೇಕೆಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕರೆ ನೀಡಿದರು.
ತಾಲೂಕಿನ ಬೆಳಗಾನಹಳ್ಳಿಯಲ್ಲಿ ಸರ್ವ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ವ ಸಂಸ್ಥೆಯು ಕೋಲಾರ ಜಿಲ್ಲೆಯಲ್ಲಿ 10 ಹೊಲಿಗೆ ತರಬೇತಿ ಶಿಬಿರಗಳನ್ನು ನಡೆಸಿ ಸುಮಾರು 400ಕ್ಕೂ ಹೆಚ್ಚು ಕಲಿಕಾರ್ಥಿಗಳು ಹೊಲಿಗೆ, ಕಸೂತಿ, ಎಂಬ್ರಾಯಿಡರಿಗಳನ್ನು ಕಲಿತು ಸ್ವಯಂ ಉದ್ಯೋಗಿಗಳಾಗಿರುತ್ತಾರೆ. ಕೋಲಾರ ಜಿಲ್ಲೆಯಲ್ಲಿ 80 ಮಹಿಳಾ ಸಂಘಗಳನ್ನು ರಚಿಸಿ ತರಬೇತಿ ನೀಡಿ ಬ್ಯಾಂಕಿನಲ್ಲಿ ಸಾಲ ಕೊಡಿಸಿರುತ್ತಾರೆ. ಆರೋಗ್ಯ ಉಚಿತ ಶಿಬಿರಗಳು, ಯುವಕ ಯುವತಿಯರಿಗೆ ತರಬೇತಿಗಳನ್ನು ನೀಡಿ ಉದ್ಯೋಗಾವಕಾಶ ಕೊಡಿಸಿರುತ್ತಾರೆ ಎಂದು ಸಂಸ್ಥೆಯ ಕಾರ್ಯವೈಖರಿ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಸರ್ವ ಸಂಸ್ಥೆಯ ನಿರ್ದೇಶಕಿ ಸುಶೀಲಮ್ಮ, ಸಿಬ್ಬಂದಿ ನಾರಾಯಣಮ್ಮ, ನವಜೀವನ ಸಂಸ್ಥೆಯ ನಿರ್ದೇಶಕಿ ಜೋಸ್ನಾ, ಗ್ರಾಪಂ ಸದಸ್ಯ ಹಾಗೂ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವೆಂಕಟಮುನಿ, ಕಾರ್ಯದರ್ಶಿ ದೇವರಾಜ್ ಹಾಗೂ ಗ್ರಾಮಸ್ಥರು ಇದ್ದರು.