ಖಾಲಿ ಸ್ಥಳಗಳ ತ್ಯಾಜ್ಯ ಸ್ವಚ್ಛಗೊಳಿಸಲು ಆಗ್ರಹ
ಬಾಗೇಪಲ್ಲಿ: ಪಟ್ಟಣದ ಬಹುತೇಕ ಖಾಲಿ ಸ್ಥಳಗಳಲ್ಲಿ ಗಿಡಗಂಟೆಗಳು ಬೆಳೆದಿರುವ ಹಿನ್ನೆಲೆಯಲ್ಲಿ ಅಕ್ಕಪಕ್ಕ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ.
ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಸರ್ಕಾರವೂ ಪಟ್ಟಣದ ಅಭಿವೃದ್ಧಿಗಾಗಿ ಕೋಟ್ಯಂತರ ರು.ಗಳ ಅನುದಾನ ನೀಡುತ್ತಿದೆ. ಆದರೆ, ಅನುದಾನ ಸದ್ಬಳಕೆ ಮಾಡಿ ಪಟ್ಟಣದ ಅಭಿವೃದ್ಧಿಗೆ ಕಾಳಜಿ ವಹಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ.
ಪುರಸಭೆ ವ್ಯಾಪ್ತಿಯ ಎಲ್ಲ 23 ವಾರ್ಡುಗಳ ಖಾಲಿ ಜಾಗಗಳು ಗಿಡಗಂಟೆಗಳಿಂದ ಹಾವು, ಚೇಳು ಇತ್ಯಾದಿ ವಿಷ ಜಂತುಗಳ ತಾಣವಾಗಿ ಪರಿವರ್ತನೆಯಾಗುತ್ತಿವೆ. ಈ ಸ್ಥಳದಲ್ಲಿ ನಾಗರಿಕರು ಕಡೆ ಕಸ ಹಾಕುವುದರಿಂದ ಗಬ್ಬುನಾಥ ಬೀರುತ್ತಿರುವುದರ ಜೊತೆಗೆ ಸೊಳ್ಳೆಗಳ ಸಾಕಾಣಿಕೆ ಕೇಂದ್ರಗಳಾಗುತ್ತಿರುವುದರಿಂದ ರೋಗರುಜಿನಗಳು ಹರಡುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಸಂಬಂಧಪಟ್ಟ ಅಧಿಕಾರಿಗಳು ಖಾಲಿ ಸ್ಥಳಗಳಲ್ಲಿರುವ ತ್ಯಾಜ್ಯ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.