ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ
ಟೇಕಲ್: ಕರ್ನಾಟಕ, ತಮಿಳುನಾಡು, ಆಂಧ್ರ ಜನತೆಯ ಆರಾಧ್ಯ ಧೈವ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ತಾಲ್ಲೂಕಿನ ಸೂಳಗಿರಿ ಯೂನಿಯನ್ ಹಂಸಗಿರಿಯ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವ ಅಸಂಖ್ಯಾತ ಭಕ್ತರ ಮಧ್ಯೆ ನಡೆಯಿತು.
ಈ ದೇವಾಲಯ ಇರುವುದು ತಮಿಳುನಾಡಿನಲ್ಲಾದರೆ ಇದರ ಭಕ್ತರು ಕರ್ನಾಟಕ, ಆಂಧ್ರದವರೆ. ಜಾತ್ರೆ ದಿನ ತಿಮ್ಮರಾಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕವಿರುತ್ತದೆ. ಮೂರು ದಿನಗಳಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬ್ರಹ್ಮರಥೋತ್ಸವ ದಿನ ದೇವರ ದರ್ಶನ ವಿಶೇಷವಾಗಿರುತ್ತದೆ. ವಿಶೇಷವಾಗಿ ಸುತ್ತಲೂ ಬೆಟ್ಟವಿದ್ದು ಮಧ್ಯೆದಲ್ಲಿರುವ ಈ ದೇವಾಲಯ ಹೆಚ್ಚು ಜನಕ್ಕೆ ಮನೆದೇವರಾದ್ದರಿಂದ ಹರಿಕೆ, ಕಾಣಿಕೆ, ಮುಡಿ ಕೊಡುವವರು ಅಧಿಕವಾಗಿರುತ್ತಾರೆ. ಹಂಸಗಿರಿ ಬೆಟ್ಟದಲ್ಲಿ ನಡೆಯುವ ಈ ವಿಶೇಷ ಪೂಜೆಯ ಮರುದಿವಸ ಹಂಸಗಿರಿ ಗ್ರಾಮದಲ್ಲಿ ಅಲ್ಲಿನ ಭಕ್ತ ವೃಂದ ತಲೆಯ ಮೇಲೆ ತೆಂಗಿನಕಾಯಿ ಹೊಡೆಯುವ ಕಾರ್ಯಕ್ರಮ ನಡೆಸುತ್ತಾರೆ. ಇದೀಗ ದೇವಾಲಯದಲ್ಲಿ ನೂತನ ಟ್ರಸ್ಟ್ ತೆರೆಯಲಾಗಿದ್ದು ಇದರಿಂದ ದೇವಾಲಯದ ಬಹುತೇಕ ಕಾಮಗಾರಿಗಳಿಗೆ ಸಹಾಯಕವಾಗಲಿದೆ.