ಬೇಡಿಕೆ ಈಡೇರಿಸಲು ಒತ್ತಾಯಿಸಿ ಧರಣಿ
ಕೋಲಾರ: ಅಂಗನವಾಡಿಗಳನ್ನು ಖಾಸಗೀಕರಣಗೊಳಿಸುವುದನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತೆಯರು ದೇಶದ ಮಾನವ ಸಂಪನ್ಮೂಲಗಳ ಬೆಳವಣಿಗೆಗಾಗಿ ಕಳೆದ 38 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹಕ್ಕುಗಳನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಖಾಸಗೀಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಬೇಡಿಕೆಗಳು: ಸರ್ಕಾರ ಐಸಿಡಿಎಸ್ ಮಿಷನ್ ಪ್ರಕ್ರಿಯೆ ತಕ್ಷಣ ಕೈಬಿಡಬೇಕು, ಸ್ವಯಂ ಸೇವಾ ಸಂಸ್ಥೆಗಳಿಗೆ ಅಂಗನವಾಡಿಗಳ ನಿರ್ವಹಣೆಯೆ ಜಾವಾಬ್ದಾರಿ ವಹಿಸಬಾರದು, ಅಂಗನವಾಡಿಯನ್ನು ಇಲಾಖೆಯನ್ನಾಗಿ ಉಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಜಿ. ಈಶ್ವರಮ್ಮ, ಜಿಲ್ಲಾಧ್ಯಕ್ಷೆ ಎಂ. ಮುನಿರಾಜಮ್ಮ, ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ನಾಗರತ್ನ, ಖಜಾಂಚಿ ಜಯಮ್ಮ, ಮಂಜುಳ, ಜಯಲಕ್ಷ್ಮೀ, ಪುಷ್ಪ, ಸರಸ್ವತಿ, ಗಾಂಧಿನಗರ ನಾರಾಯಣಸ್ವಾಮಿ ಇದ್ದರು.