ಮನೆ ಮನೆಗೂ ಆಮ್ ಆದ್ಮಿ
ಗೌರಿಬಿದನೂರು: ರಾಷ್ಟ್ರೀಯ ಪಕ್ಷಗಳಿಂದ ದೇಶದ ನೈಸರ್ಗಿಕ ಸಂಪತ್ತು ಲೂಟಿ ಆಗಿ ದೇಶದ ಆರ್ಥಿಕ ಭದ್ರತೆ ದುರ್ಬಲಗೊಳಿಸಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಮಿತಿ ಸಂಚಾಲಕ ರವೀಂದ್ರ ಆರೋಪಿಸಿದರು.
ಮನೆ ಮನೆಗೂ ಆಮ್ ಆದ್ಮಿ ಮತ್ತು ಜಾಡು ಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂಬ ಕಾರ್ಯಕ್ರಮದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ದೇಶದ ಪ್ರಜಾಪಭುತ್ವ ಬಂಡವಾಳ ಶಾಹಿಗಳ ಕೈ ಗೊಂಬೆಯಾಗಿದೆ ಎಂದರು. ಸರ್ಕಾರಿ ಸವಲತ್ತುಗಳ ದುರುಪಯೋಗ, ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಸತತ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸಿದ್ದಾರೆ. ಭ್ರಷ್ಟಾಚಾರ ಕುಟುಂಬ ರಾಜಕಾರಣಗಳಿಂದ ಈ ದೇಶದ ರುಪಾಯಿ ಮೌಲ್ಯ ಕುಸಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗಿದೆ ಎಂದರು.
ರಾಜ್ಯ ಸಮಿತಿ ಸದಸ್ಯ ವಿಜಯ್ಶರ್ಮಾ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭೆ ಅಭ್ಯರ್ಥಿ ಈ ಜಿಲ್ಲೆಯ ಸಾಮಾನ್ಯ ಪ್ರಜೆಯಾಗಿರುತ್ತಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ವೀರಪ್ಪ ಮೊಯ್ಲಿ ಸೇರಿದ್ದು ಇವರ ವಿರುದ್ಧ ನಮ್ಮ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ವೀರಪ್ಪ ಮೊಯ್ಲಿಯವರು ಈ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ತರುವಲ್ಲಿ ವಿಫಲರಾಗಿರುವುದು ಈ ಜಿಲ್ಲೆಯ ಮತದಾರರಿಗೆ ಮಾಡಿದ ಮೋಸ ಎಂದರು. ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ತಿಮ್ಮಾರೆಡ್ಡಿ, ರಾಜು, ಯಲಹಂಕದ ಶುಭಾ ವೆಂಕಟೇಶ್, ಅಭಿಲಾಷ್, ಭಾರ್ಗವ್, ಸುನೀಲ್, ತೇಜಸ್ ಇದ್ದರು.