ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ರೇಲ್ವೆ ತಾಂತ್ರಿಕ ಸಿಬ್ಬಂದಿಯಿಂದ ಕಿರಿಕಿರಿ

Rashmi Kasaragodu
Updated On : 19 Feb 2014, 1:58 am

ಕ.ಪ್ರ.ವಾರ್ತೆ    ಕೋಲಾರ    ಫೆ. 18
ನಗರದ ಕೋಲಾರ-ಟೇಕಲ್ ರಸ್ತೆಯಲ್ಲಿನ ರೇಲ್ವೆ ಲೆವೆಲ್ ಕ್ರಾಸಿಂಗ್ ಬಳಿ ರೇಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿಯು ಪದೆ ಪದೆ ಟ್ರ್ಯಾಲಿಯ ಮೇಲೆ ಓಡಾಡುವುದರಿಂದ ವಾಹನ ಚಾಲಕರು ಮತ್ತು ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
ಕೋಲಾರ ರೇಲ್ವೆ ನಿಲ್ದಾಣದಿಂದ ಟ್ರ್ಯಾಲಿಯಲ್ಲಿ ಕುಳಿತು ಕಾಮಗಾರಿ ಪರಿಶೀಲನೆಗೆ ಹೋಗುವ ತಾಂತ್ರಿಕ ಸಿಬ್ಬಂದಿಗಾಗಿ ಸುಮಾರು ಅರ್ಧಗಂಟೆ ಗೇಟ್  ಬಂದ್ ಮಾಡುವುದರಿಂದ ಟೇಕಲ್ ರಸ್ತೆಯಲ್ಲಿ ನೂರಾರು ವಾಹನಗಳು ನಿಲುಗಡೆ ಆಗುತ್ತವೆ. ಗೇಟ್ ತೆಗೆದ ಬಳಿಕ ಒಟ್ಟಿಗೆ ಎಲ್ಲಾ ವಾಹನಗಳು ರೇಲ್ವೆ ಹಳಿಗಳ ಮೇಲೆ ಸಾಗುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಅಲ್ಲದೆ, ವಾಹನ ಚಾಲಕರ ನಡುವೆ ಘರ್ಷಣೆಗಳಾಗುವುದಕ್ಕೆ ಕಾರಣವಾಗುತ್ತಿದೆ.
ಸಂಚಾರ ದಟ್ಟಣೆ ಇಲ್ಲದ ಸಮಯದಲ್ಲಿ ತಾಂತ್ರಿಕ ಸಿಬ್ಬಂದಿ ಕಾಮಗಾರಿ ವೀಕ್ಷಣೆ ಮಾಡಲು ಟ್ರ್ಯಾಲಿಯ ಮೇಲೆ ಹೋಗುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಕೋಲಾರ-ಟೇಕಲ್ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟವಾಗಿರುತ್ತದೆ. ವಾಹನ ಮತ್ತು ಜನತೆಯ ಅನುಕೂಲಕ್ಕಾಗಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದ ರೇಲ್ವೆ ಇಲಾಖೆಯವರು ಜನರಿಗೆ ಶಿಕ್ಷೆ ಕೊಡುವುದಕ್ಕೆ ಅಧಿಕಾರವಿಲ್ಲವೆಂದು ಸಾರ್ವಜನಿಕರು ತಿಳಿಸಿದ್ದಾರೆ.  ಅಲ್ಲದೆ, ರೇಲ್ವೆ ಲೆವೆಲ್ ಕ್ರಾಸ್ಸಿಂಗ್ ಬಳಿ ಸಂಚಾರ ದಟ್ಟಣೆ ಎಂಬುದು ತಾಂತ್ರಿಕ ಸಿಬ್ಬಂದಿಯ ಅರಿವಿಗೂ ಬಂದಿರುವುದರಿಂದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಟೇಕಲ್ ರಸ್ತೆಯಲ್ಲಿ ಹಾದು ಹೋಗಿರುವ ರೇಲ್ವೆ ಕ್ರಾಸ್ಸಿಂಗ್ ಬಳಿ ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement