ಈ ಬಾರಿ ಮ್ಯಾಚ್ ಫಿಕ್ಸಿಂಗ್ ಆಗಲ್ಲ
ಕಪ್ರ ವಾರ್ತೆ ಕೋಲಾರ ಫೆ.19
ಮೀಸಲು ಲೋಕಸಭಾ ಕ್ಷೇತ್ರವಾದ ಕೋಲಾರದಲ್ಲಿ ಈ ಬಾರಿ ಮ್ಯಾಚ್ ಫಿಕ್ಸಿಂಗ್ ಆಗಲ್ಲವೆಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಮಹಾಲಕ್ಷ್ಮೀ ಬಡಾವಣೆಯ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪನವರ ಗೆಲುವಿಗಾಗಿ ಮ್ಯಾಚ್ ಫಿಕ್ಸಿಂಗ್ ಯಾರು ಮಾಡಿದ್ದರೂ ಎಂಬುದು ಮಾಧ್ಯಮದವರಿಗೆ ಮತ್ತು ಮತದಾರರಿಗೂ ಗೊತ್ತಿದೆ. ಆದರೆ, ಈ ಬಾರಿ ಅಂತಹ ಬೆಳವಣಿಗೆಗಳು ಉಂಟಾಗಲಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋಲಾರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರೆಂಬುದು ಇನ್ನು ನಿಶ್ಚಯವಾಗಿಲ್ಲ, ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯನವರು ಕೋಲಾರದಿಂದ ಸ್ಪರ್ಧಿಸುವುದಕ್ಕೆ ಪಕ್ಷದ ಹಿರಿಯ ನಾಯಕ ದೇವೇಗೌಡರು ಸಮ್ಮತಿಸಿದ್ದರು. ಆದರೆ, ಸ್ಪರ್ಧೆಗೆ ಸಿದ್ದಯ್ಯ ಹಿಂದೇಟು ಏಕೆ ಹಾಕಿದ್ದಾರೆಂಬುದು ತಮಗೆ ಅರ್ಥವಾಗುತ್ತಿಲ್ಲ, ಕೋಲಾರದಿಂದ ಸಿದ್ದಯ್ಯ,ಪ್ರೊ.ಮೈಲಾರಪ್ಪ ಇಲ್ಲವೇ ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ ಈ ಮೂವರಲ್ಲಿ ಯಾರೇ ಸ್ಪರ್ಧಿಸಿದರೂ ಗೆಲ್ಲುವುದಕ್ಕೆ ಅನುಕೂಲವಾಗುತ್ತದೆ ಎಂದರು.
ಟಿಕೆಟ್ ಹಂಚಿಕೆ ವಿಚಾರದಲ್ಲಿ ನಿಮ್ಮ ಹೈಕಮಾಂಡ್ ಅನುಸರಿಸುತ್ತಿರುವ ಮಾನದಂಡವೇನು ಎಂಬುದಕ್ಕೆ ಸ್ಪಷ್ಟ ಉತ್ತರ ನೀಡಲು ತಡಬಡಿಸಿದ ಶ್ರೀನಿವಾಸಗೌಡರು, ಚುನಾವಣೆ ಸಮಯದಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಷ್ಟು ದೊಡ್ಡ ನಾಯಕ ನಾನಲ್ಲ, ಹೈಕಮಾಂಡ್ ಅಳತೆಗೋಲು ತಿಳಿಸುವುದು ಕಷ್ಟದ ಕೆಲಸ, ಉತ್ತಮ ವ್ಯಕ್ತಿತ್ವ ಹೊಂದಿರುವವರಿಗೆ ಮತ್ತು ಚುನಾವಣೆಯನ್ನು ಸಮರ್ಥವಾಗಿ ಎದುರಿಸಬಲ್ಲ ವ್ಯಕ್ತಿಗಳಿಗೆ ಟಿಕೆಟ್ ನೀಡಬೇಕಾಗುತ್ತದೆ, 2004ರ ದಶಕದವರೆಗೆ ಚುನಾವಣೆಗಳಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗಿರಲಿಲ್ಲ. ನಂತರದ ಚುನಾವಣೆಗಳಲ್ಲಿ ಹಣ ಪ್ರಧಾನ ಪಾತ್ರ ನಿರ್ವಹಿಸುವಂತಾಗಿರುವುದರಿಂದ ಮತದಾನದ ಗಾಂಭೀರ್ಯತೆ ಕಡಿಮೆ ಆಗುತ್ತಿದೆ ಎಂದು ವಿಷಾಧಿಸಿದರು. ತಾವು ಮೊದಲ ಸಾರಿ ಚುನಾವಣೆಗೆ ನಿಂತಾಗ ಜನರೇ ತಮ್ಮ ಸ್ವಂತ ಹಣದಿಂದ ಗೆಲ್ಲಿಸಿದ್ದರು, ಅದೇ ರೀತಿ ಹಿರಿಯ ರಾಜಕಾರಣಿ ಪಟ್ಟಾಭಿರಾಮನ್ ಅವರು ಹತ್ತು ರುಪಾಯಿ ಖರ್ಚು ಮಾಡದೆ ಎಂಎಲ್ಎ ಆಗಿ ಗೆದ್ದಿದ್ದರು, ವೆಂಕಟಗಿರಿಯಪ್ಪನವರು ಚುನಾವಣೆಗೆ ಹಣ ಖರ್ಚು ಮಾಡಿರಲಿಲ್ಲ. ಆದರೆ, 2004ರ ಚುನಾವಣೆ ವೇಳೆಗೆ ಬೆಂಗಳೂರು ಸುತ್ತಮುತ್ತಲು ಜಮೀನು ಬೆಲೆ ಜಾಸ್ತಿ ಆದ್ದರಿಂದ ರಾಜಕಾರಣ ಬೇರೆ ದಿಕ್ಕಿಗೆ ಹೋಗಿದೆ ಎಂದು ಅಭಿಪ್ರಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಹಳೆಯ ಸ್ನೇಹಿತರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡುವಂತೆ ಕೋರಿದಲ್ಲಿ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ, ಆ ರೀತಿ ಕೇಳಲು ಸಾಧ್ಯವೇ ಇಲ್ಲ, ಒಂದು ವೇಳೆ ಕೇಳಿದರೂ ನಾನು ಕಾಂಗ್ರೆಸ್ಸಿಗೆ ಸಹಾಯ ಮಾಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದರು.