ಕಣ್ಣೀರು ತರಿಸಿದ 'ಗಿರಿಜಾ ಕಲ್ಯಾಣ'
ಗುಡಿಬಂಡೆ: ಬೆಂಗಳೂರಿನ ಆದಮ್ಯ ರಂಗ ಸಂಸ್ಕೃತಿ ರಂಗ ನಿರ್ದೇಶಕ ಮಾಲತೇಶ್ ಬಡಿಗೇರ್ ಗಿರಿಜಾ ಕಲ್ಯಾಣ ನಾಟಕ ನೋಡುಗರ ಕಣ್ಣಲ್ಲಿ ಕಣ್ಣೀರು ತರಿಸಿದ್ದು ವಿಶೇಷವಾಗಿತ್ತು. ಪಟ್ಟಣದ ಗಾಯತ್ರಿ ಪ್ರಸಾಧ ಭವನದಲ್ಲಿ ಉನ್ನತಿ ನಾಟಕ ಮತ್ತು ಕಲಾ ಉತ್ಸವದ ಎರಡನೇ ದಿನ ನಾಟಕ ಆಯೋಜಿಸಲಾಗಿತ್ತು.
ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ
ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಪ್ರತಿಭಟನೆ ಮತ್ತು ಹೋರಾಟಗಳನ್ನು ನಡೆಸಿದರೆ ವಿದ್ಯಾರ್ಥಿ ವೇತನ ನೀಡಲಾಗುವುದಿಲ್ಲ ಎಂಬ ರಾಜ್ಯ ಸರ್ಕಾರದ ಆದೇಶವನ್ನು ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ಪ್ರವಾಸಿ ಮಂದಿರದ ಆವರಣದಿಂದ ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆ ಹೊರಟ ಎಸ್ಎಫ್ಐ ಮತ್ತು ಎಬಿವಿಪಿ ಸಂಘಟನೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕು ಕಿತ್ತುಕೊಳ್ಳುವ ಆದೇಶವನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿದರು. ಎಸ್ಎಫ್ಐ ಸಂಘಟನೆಯ ಮುಖಂಡರು ನಗರದ ಶಿಡ್ಲಘಟ್ಟ ವೃತ್ತದಲ್ಲಿ ಸರ್ಕಾರದ ಪ್ರತಿಕೃತಿ ದಹಿಸಿದರು.
ಶೈಕ್ಷಣಿಕವಾಗಿ ನಾನಾ ಸಮಸ್ಯೆಗಳು ತಾಂಡವವಾಡುತ್ತಿದ್ದು ಬಡ ವಿದ್ಯಾರ್ಥಿಗಳಿಗೆ ಮಾರಕವಾದ ನೀತಿಗಳು ಮತ್ತು ಯೋಜನೆಗಳನ್ನು ಜಾರಿಗೆ ತರುವಂತಹುದನ್ನು, ಮೂಲ ಸೌಕರ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುವುದನ್ನು ಕಾಣಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ತಮ್ಮ ಹಕ್ಕುಗಳಿಗಾಗಿ ವಿದ್ಯಾರ್ಥಿಗಳು ಹೋರಾಟ ನಡೆಸುವುದು ಸಹಜ.
ಈ ಮೂಲಕ ಅನೇಕ ನ್ಯಾಯವನ್ನು ಪಡೆದುಕೊಳ್ಳಬೇಕಾಗುತ್ತದೆ. ಆದರೆ,ರಾಜ್ಯ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಾಜಶೇಖರ್, ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಈಶ್ವರಪ್ಪ, ಬಾಬುರೆಡ್ಡಿ, ಮನೋಹರ, ಶ್ರೀಕಾಂತ್, ರಮೇಶ್ ಇದ್ದರು.
ಕೇಂದ್ರ ಯುಪಿಎ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನಕ್ಕೆ ಪೆಟ್ಟು ಬೀಳುವಂತಹ ನೀತಿಗಳನ್ನು ಜಾರಿಗೆಗೆ ತರುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಬಡ ವಿದ್ಯಾರ್ಥಿಗಳ ಹಕ್ಕುಗಳನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎಬಿವಿಪಿ ಪ್ರತಿಭಟನೆಯಲ್ಲಿ ಮುಖಂಡರಾದ ಮಂಜುನಾಥ್, ಅರುಣ್, ರಾಜಶೇಖರ್, ಹರೀಶ್ ಮುಂತಾದವರು ಭಾಗವಹಿಸಿದ್ದರು.