ಮನಸೆಳೆದ ಮಕ್ಕಳ ನಾಟಕೋತ್ಸವ
ಗುಡಿಬಂಡೆ: ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರಿನ ಬಾಲಭವನ ಆಶ್ರಯದಲ್ಲಿ ಶಿಶು ಅಭಿವೃದ್ಧಿ ಯೋಜನೆಯಡಿ ನಡೆದ ತಾಲೂಕು ಮಟ್ಟದ ಮಕ್ಕಳ ನಾಟಕೋತ್ಸವ ನೋಡುಗರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಸಿ. ರವಿಕುಮಾರ್ ದೃಶ್ಯ ಮಾಧ್ಯಮಗಳಿಂದ ರಂಗಭೂಮಿ ಕಲೆ ನಶಿಸುತ್ತಿರುವ ಸನ್ನಿವೇಶದಲ್ಲಿ ಮಕ್ಕಳು ಪೌರಾಣಿಕ, ಸಾಮಾಜಿಕ ಪಿಡುಗಗಳ ಕುರಿತ ನಾಟಕಗಳನ್ನು ಪ್ರದರ್ಶಿಸಿರುವುದು ಸಂತಸದ ವಿಚಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಡಿಪಿಒ ಸಿದ್ದಲಿಂಗಪ್ಪ, ಸಮಾಜದಲ್ಲಿ ನಡೆಯುವ ದುಷ್ಕೃತ್ಯಗಳು, ನೀತಿ ಕಥೆಗಳನ್ನು ಆಧರಿಸಿದ ನಾಟಕಗಳನ್ನು ಮುಗ್ದ ಮಕ್ಕಳು ಪ್ರದರ್ಶಿಸಿದ್ದು ಹೆಮ್ಮೆಯ ಸಂಗತಿ ಎಂದರು. ನಂತರ ವಿಜೇತ ಮಕ್ಕಳ ನಾಟಕ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ವೃತ್ತ ನಿರೀಕ್ಷಕ ಶಿವಕುಮಾರ್, ಮಕ್ಕಳು ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ವಿಷಯಗಳಲ್ಲಿಯೂ ಪಾಂಡಿತ್ಯ ಪಡೆಯಬೇಕಾಗಿದೆ. ಪೋಷಕರು ಮಕ್ಕಳಿಗೆ ಸಮಾಜಕ್ಕಾಗಿ ತಮ್ಮ ಜೀವವನ್ನೇ ಪಣ ಇಟ್ಟಂತಹ ಮಹಾನ್ ನಾಯಕರ ಜೀವನ ಶೈಲಿಯನ್ನು ತೋರಿಸಬೇಕು ಎಂದು ಸಲಹೆ ನೀಡಿದರು. ಈ ವೇಳೆ ಅರವಿಂದ ಪ್ರೌಢಶಾಲೆ ಮಕ್ಕಳು ವರದಕ್ಷಿಣೆ ಸಾಮಾಜಿಕ ಪಿಡುಗು ಎಂಬ ನಾಟಕ ಪ್ರದರ್ಶಿಸಿ ಮೊದಲ ಬಹುಮಾನ, ಅಂಗುಲಿಮಾಲ ಗೌತಮ ಬುದ್ಧನ ಉಪದೇಶದಿಂದ ಪರಿವರ್ತನೆಯಾದ ನಾಟಕ ಪ್ರದರ್ಶಿಸಿ ಎರಡನೇ ಬಹುಮಾನ ಮತ್ತು ವಿದ್ಯೆ ಕದಿಯಲಾರದ ಸಂಪತ್ತು ಎಂಬ ನಾಟಕ ಪ್ರದರ್ಶಿಸಿ ನ್ಯೂ ಪಬ್ಲಿಕ್ ಶಾಲೆಯ ಮಕ್ಕಳು ಮೂರನೇ ಬಹುಮಾನ ಪಡೆದರು.
ತೋಟಗಾರಿಕೆ ಇಲಾಖೆಯ ರವಿಕುಮಾರ್, ಪ.ಪಂ. ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ನ್ಯೂ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಪಿ.ಎನ್. ರಾಜಶೇಖರ, ಮುಖ್ಯ ಶಿಕ್ಷಕಿ ಪರಿಮಳ, ಶಿಕ್ಷಕರಾದ ಬಾಬಾಜಾನ್, ಗಂಗಾಧರ, ಗೋಪಾಲಕೃಷ್ಣ, ವೆಂಕಟೇಶ, ಅಶ್ವತ್ಥಪ್ಪ, ಚೈತ್ರ, ಮೊಹಸೀನಾ, ಅಶ್ವತ್ಥಮ್ಮ, ಪೂರ್ಣಿಮಾ, ಶಿಲ್ಪಾ, ಶ್ರೀನಿವಾಸ್, ನಸ್ರೀನ್ ತಾಜ್ ಇದ್ದರು.
ನಾಳೆ ವಿದ್ಯುತ್ ವ್ಯತ್ಯಯ
ಮಾಲೂರು: ಮಾಲೂರಿನ ಬೆಸ್ಕಾಂನಲ್ಲಿನ 220 ಕಿ.ವ್ಯಾಟ್ ಸರ್ವೀಸ್ ಸ್ಟೇಷನ್ನಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ನಡೆಯಲಿರುವುದರಿಂದ ಶುಕ್ರವಾರ ತಾಲೂಕಿನಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ಅಭಿಯಂತರ ವಾಸುದೇವ ತಿಳಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೂ ಇಲ್ಲಿನ ಸರ್ವೀಸ್ ಸ್ವೇಷನ್ ನಲ್ಲಿಂದ ಪೂರೈಕೆಯಾಗವ ಪ್ರದೇಶಗಳಲ್ಲಿ ವಿದ್ಯುತ್ನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.