ವಿದ್ಯಾರ್ಥಿ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಗೌರಿಬಿದನೂರು: ವಿದ್ಯಾರ್ಥಿಗಳು ಪ್ರತಿಭಟನೆ ಮಾಡಬಾರದು ಎಂದು ಸಂವಿಧಾನ ಬದ್ಧ ಹಕ್ಕು ಕಸಿಯಲು ರಾಜ್ಯ ಸರ್ಕಾರ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿ ಎಬಿವಿಪಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಬಿವಿಪಿ ಪ್ರಧಾನ ಕಾರ್ಯದರ್ಶಿ ಹರೀಶ್ ಮಾತನಾಡಿ, ರಾಜ್ಯ ಸರ್ಕಾರ ವಿದ್ಯಾರ್ಥಿ ವಿರೋಧಿ ಹಾಗೂ ಸಂವಿದಾನ ಬಾಹಿರ ಕಾಯ್ದೆ ಜಾರಿಗೆ ತರುವ ಮೂಲಕ ವಿದ್ಯಾರ್ಥಿಗಳನ್ನು ಕಡೆಗಣಿಸಲು ತಯಾರಿ ನಡೆಸಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ವಿನಯ್, ಆನಂದ್, ಸುನಿಲ್, ಚರಣ್, ಅನಿತ, ಪವಿತ್ರ, ಮನೋಜ್.ಎನ್ ಇದ್ದರು.
ಕೃಷಿ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ
ಬಂಗಾರಪೇಟೆ: ಪಟ್ಟಣದ ಬಯಲು ರಂಗಮಂದಿರದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿರುವ ಕೃಷಿ, ಗೃಹೋಪಯೋಗಿ ವಾಹನಗಳ ಮತ್ತು ಪುಸ್ತಕಗಳ ಪ್ರದರ್ಶನಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಉತ್ಸವಕ್ಕೆ ನಾನಾ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿದ್ದರು. ಉತ್ಸವದಲ್ಲಿ ಗೃಹೋಪಯೋಗಿ ವಸ್ತುಗಳು, ರೈತರಿಗೆ ಕೃಷಿ ಸಲಕರಣೆಗಳ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಪ್ರಿಯರಿಗೆ ಪುಸ್ತಕ ಮೇಳ ಹಾಗೂ ವಾಹನ ಪ್ರಿಯರಿಗೆ ನಾನಾ ಕಂಪನಿಯ ಕಾರು ಮತ್ತು ದ್ವಿಚಕ್ರ ವಾಹನಗಳ ಬದಲಾವಣೆ ಮೇಳ ಪ್ರದರ್ಶಿಸಲಾಯಿತು. ಉತ್ಸವವನ್ನು ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಉದ್ಘಾಟಿಸಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ಗ್ರಾಹಕರಿಗೆ ಕೈಗೆಟಕುವ ದರಗಳಲ್ಲಿ ಲಭಿಸುವಂತೆ ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಸಮಿತಿ ಪ್ರದರ್ಶನ ಹಮ್ಮಿಕೊಂಡಿರುವುದಕ್ಕೆ ಅಭಿನಂದಿಸಿದರು. ಕೃಷಿ ಮತ್ತು ಗ್ರಾಹಕರ ಅಭಿವೃದ್ಧಿ ಪ್ರದರ್ಶಕರ ಮುಖ್ಯ ವ್ಯವಸ್ಥಾಪಕ ಎ.ಎಂ. ಸುರೇಶ್ ಮಾತನಾಡಿ, ಮಧ್ಯಮ ವರ್ಗದ ಜನರಿಗೆ ನೆರವಾಗಲೆಂದು ಕಳೆದ 59 ವರ್ಷಗಳಿಂದ ರಾಜ್ಯದ ನಾನಾ ಭಾಗಗಳಲ್ಲಿ ಇಂತಹ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಭಾಗವಹಿಸಿ ಇದರ ಉಪಯೋಗ ಪಡೆಯುವಂತೆ ಕೋರಿದರು.
ಉತ್ಸವದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಹೋಂಡಾ ಕಂಪನಿ ಸೇರಿದಂತೆ ಹತ್ತಾರು ಕಂಪನಿಗಳು ಪಾಲ್ಗೊಂಡಿದ್ದವು. ಪಿಎಸ್ಐ ಲಕ್ಷ್ಮಣಪ್ಪ, ನವಜ್ಯೋತಿ ಪ್ರಕಾಶನದ ಪ್ರಕಾಶಕ ಕೆ. ರಾಜಣ್ಣ ಇದ್ದರು.