ಶಿಕ್ಷಣದ ವ್ಯಾಪಾರೀಕರಣ ವಿರುದ್ಧ ಹೋರಾಟ
ಕಪ್ರ ವಾರ್ತೆ ಕೋಲಾರ ಫೆ.19
ನಗರದಲ್ಲಿ ನಡೆದ ಎಸ್ಎಫ್ಐ 13ನೇ ರಾಜ್ಯ ಸಮ್ಮೇಳನದಲ್ಲಿ ಶಿಕ್ಷಣದ ವ್ಯಾಪಾರೀಕರಣ ವಿರುದ್ಧ ಹೋರಾಟ ಮುಂದುವರೆಸಲು ನಿರ್ಣಯ ಕೈಗೊಳ್ಳಲಾಗಿದೆ, ಇದಕ್ಕಾಗಿ ಸಂಘಟನೆ ಹೊಸ ಪದಾಧಿಕಾರಿಗಳು ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಿದ್ದಾರೆಂದು ಎಸ್ಎಫ್ಐ ಕೇಂದ್ರ ಸಮಿತಿ ಪದಾಧಿಕಾರಿ ಅನಂತನಾಯ್ಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಎಫ್ಐ ರಾಜ್ಯ ಸಮ್ಮೇಳನ ಕೋಲಾರದಲ್ಲಿ ಯಶಸ್ವಿಗೊಳ್ಳುವುದಕ್ಕೆ ಜಿಲ್ಲೆಯ ಜನತೆ ನೀಡಿದ ಸಹಾಯ, ಸಹಕಾರ ಕಾರಣವೆಂದರು. ಶಾಲಾ-ಕಾಲೇಜುಗಳಲ್ಲಿ ಡೊನೇಶನ್ ಹಾವಳಿ, ಶುಲ್ಕ ಹೆಚ್ಚಳ, ಖಾಸಗಿ ಮತ್ತು ವಿದೇಶಿ ವಿವಿ ಮಸೂದೆ, ಹಾಸ್ಟೆಲ್ ವಿದ್ಯಾರ್ಥಿಗಳ ಹಕ್ಕುಗಳನ್ನು ದಮನ ಮಾಡುವುದು, ಪ್ರಗತಿಪರ ಪುಸಕ್ತಗಳನ್ನು ಸುಟ್ಟು ಹಾಕುತ್ತಿರುವ ಹಿಂದುತ್ವ ನೀತಿ ಹಾಗೂ ರಾಜ್ಯ ಬಜೆಟ್ ವಿರೋಧಿಸಿ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಆರ್ಟಿಇ ಕಾಯಿದೆ ಸಮರ್ಪಕ ಜಾರಿ, ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ನಲ್ಲಿ ಶೇ.30 ರಷ್ಟು ಹಣ ಮೀಸಲು, ಸರ್ಕಾರಿ ಶಾಲಾ-ಕಾಲೇಜುಗಳಿಗೆ ಮೂಲಸೌಕರ್ಯ, ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ವಿಸ್ತರಣೆ, ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆಯಲ್ಲಿ ಇರುವ ಲೋಪಗಳನ್ನು ಸರಿಪಡಿಸಿ ಮಸೂದೆ ಜಾರಿ, ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆ, 2006ರ ವೃತ್ತಿ ಶಿಕ್ಷಣ ಕಾಯಿದೆ ರದ್ಧತಿ, ವಿದ್ಯಾರ್ಥಿ ಸಂಘದ ಚುನಾವಣೆ, ಕಾರ್ಯ ಶಿಕ್ಷಕ-ಉಪನ್ಯಾಸಕ ಹಾಗೂ ಸಿಬ್ಬಂದಿ ನೇಮಕ ಮುಂತಾದವುಗಳಿಗಾಗಿ ನಿರಂತರ ಹೋರಾಟಗಳ ಮೂಲಕ ವಿದ್ಯಾರ್ಥಿಗಳ ಹಿತ ಕಾಪಾಡಲಿದೆ ಎಂದು ತಿಳಿಸಿದರು.
ಹೋರಾಟಗಳಲ್ಲಿ ಭಾಗವಹಿಸಿರುವ 750 ಎಸ್ಎಫ್ಐ ಕಾರ್ಯಕರ್ತರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕೆಂದ ಅನಂತ ನಾಯ್ಕ್, ಮುಂದಿನ ದಿನಗಳಲ್ಲಿ ಐಕ್ಯ ಹೋರಾಟಕ್ಕಾಗಿ ವಿವಿಧ ಪ್ರಗತಿಪರ ಸಂಘಟನೆಗಳನ್ನು ಜೊತೆ ಸೇರಿಸಿಕೊಳ್ಳಲು ಉದ್ದೇಶಿಸಲಾಗಿದೆ, ಎಬಿವಿಪಿಯನ್ನು ನಮ್ಮ ಹೋರಾಟಕ್ಕೆ ಆಹ್ವಾನಿಸಲು ಸಿದ್ಧ. ಆದರೆ, ಅವರು ಬರಲು ಸಿದ್ಧರಿಲ್ಲವೆಂದರು. ವಿದ್ಯಾರ್ಥಿ ಸಂಘಟನೆಗಳು ಕೇವಲ ಹಕ್ಕುಗಳಿಗಾಗಿ ಮಾತ್ರ ಹೋರಾಡದೇ ಕರ್ತವ್ಯವನ್ನು ಪಾಲಿಸುವ ಜವಾಬ್ದಾರಿ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಸ್ಎಫ್ಐ ನೂತನ ರಾಜ್ಯಾಧ್ಯಕ್ಷ ವಿ. ಅಂಬರೀಶ್ ಮಾತನಾಡಿ, ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಹೋರಾಟ ಮೊಟಕುಗೊಳಿಸಲು,ದಮನ ಮಾಡಲು ಎಸ್ಮಾ ಜಾರಿ ಮಾಡಲು ಹೊರಟಿರುವುದರ ವಿರುದ್ಧ ನಮ್ಮ ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ, ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ ಎಂದರು.
ಮಾತೃ ಭಾಷಾ ಶಿಕ್ಷಣಕ್ಕೆ ಒತ್ತಾಯಿಸಿ ಫೆ.23 ರಂದು ಮಾತೃ ಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ, ರಾಜ್ಯದಲ್ಲಿ ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕು, ಬೇರೆ ಭಾಷೆಗಳನ್ನು ಮಕ್ಕಳಿಗೆ ಕಲಿಸುವುದಕ್ಕೆ ನಮ್ಮ ವಿರೋಧವಿಲ್ಲವೆಂದು ಸ್ಪಷ್ಟಪಡಿಸಿದರು. ನೂತನ ರಾಜ್ಯ ಕಾರ್ಯದರ್ಶಿ ಗುರುರಾಜ್ ದೆಸಾಯಿ ಮಾತನಾಡಿ, ಒಬಿಸಿ ವಿದ್ಯಾರ್ಥಿಗಳ ಶುಲ್ಕ ನೀತಿ ವಿರೋಧಿಸಿ ಹೋರಾಟ ನಡೆಸುತ್ತೇವೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿ ಕೂಡಲೇ ಮಧ್ಯ ಪ್ರವೇಶ ಮಾಡಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ, ಕಾರ್ಯದರ್ಶಿ ಮಾರ್ಕಡಯ್ಯ, ಸಹ ಕಾರ್ಯದರ್ಶಿ ಸಿ. ಅಂಬರೀಶ್, ದಿವ್ಯಾ ಇದ್ದರು.