ಸಮುದಾಯ ಭವನ ಉದ್ಘಾಟನೆ
ಮಧುಗಿರಿ: ಮಧುಗಿರಿಯಲ್ಲಿ ಬಲಿಜ ಸಮಾಜದ ವತಿಯಿಂದ ನಿರ್ಮಿಸಿರುವ ಎಂ.ಎಸ್. ರಾಮಯ್ಯ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯದ ಗೃಹ ಪ್ರವೇಶ ಕಾರ್ಯಕ್ರಮ ವಿಧಾನ ಪರಿಷತ್ ಸದಸ್ಯ ಎಂ.ಆರ್. ಸೀತಾರಾಮ್ ನೇತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಜನಾಂಗದ ಮುಖಂಡರಾದ ಆಡಿಟರ್ ರಾಮಚಂದ್ರಪ್ಪ, ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ, ಮಾಜಿ ಅಧ್ಯಕ್ಷ ಕೆ. ಪ್ರಕಾಶ್, ಸದಸ್ಯ ಗೋಪಿನಾಥ್, ಮುಖಂಡ ಆರ್.ಎಲ್.ಎಸ್.ರಮೇಶ್, ಎಂ.ಎಸ್. ಶಂಕರನಾರಾಯಣ, ಎಂ.ಆರ್.ಜಗನ್ನಾಥ್, ಉಮೇಶ್, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ನಂದಿನಿ ಹಾಲು ಉತ್ಪಾದಕ ಸಹಕಾರ ಸಂಘದ 2014-15 ರಿಂದ 2018-19 ನೇ ಸಾಲಿನ 5 ವರ್ಷದ ಅವಧಿಗೆ ಸಂಘದ ನೂತನ ಅಧ್ಯಕ್ಷರಾಗಿ ಚನ್ನಬಸವಯ್ಯ ಅವರನ್ನು ಸೋಮವಾರದಂದು ಚುನಾವಣಾಧಿಕಾರಿ ಎನ್.ಬಿ. ಶಿವಣ್ಣ ಅವರ ನೇತೃತ್ವಲ್ಲಿ ಸಂಘದ ಇತರ ಸದಸ್ಯರ ಸಹಮತದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸಂಘದ ನಿರ್ದೇಶಕರಾಗಿ ಓಂಕಾರಮೂರ್ತಿ, ಚೇತನ್ಕುಮಾರ್, ಬಾವಿಮನೆ ನಾಗರಾಜು, ದಯಾನಂದ್, ಎಚ್.ಪಾಳ್ಯ ನಾಗರಾಜು, ದೊರೆನಟರಾಜು, ಭೂತಯ್ಯ,ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಇಂದಿನಿಂದ ನಾಟಕೋತ್ಸವ
ಮಧುಗಿರಿ: ಅಭಿನಯ ರಂಗ ಕೇಂದ್ರ ಕರ್ನಾಟಕ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿ ಗುಟ್ಟೆ ಗ್ರಾಮದ ಶ್ರೀ ಆಂಜನೇಯಸ್ವಾಮಿ ಬಯಲು ರಂಗಮಂದರದಲ್ಲಿ ಜಾನಪದ ಮತ್ತು ಪೌರಾಣಿಕ ಗ್ರಾಮೀಣ ನಾಟಕೋತ್ಸವ, ರಂಗಗೀತೆಗಳ ವಿಚಾರ ಸಂಕಿರಣ ಹಾಗೂ ರಂಗ ಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಫೆ.20 ರಿಂದ 24ರವರೆಗೆ 5 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿವೆ ಎಂದು ಅಭಿನಯ ರಂಗ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಮಹಿಳೆ ಆತ್ಮಹತ್ಯೆ
ಟೇಕಲ್: ಸಮೀಪದ ಬಲ್ಲಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದ್ದು ಕಾರಣ ತಿಳಿದುಬಂದಿಲ್ಲ.
ಮೃತಪಟ್ಟಿರುವ ವಿವಾಹಿತ ಮಹಿಳೆ ಗೀತಮ್ಮ(28) ಎಂದು ಗುರ್ತಿಸಲಾಗಿದ್ದು, ಸ್ಥಳಕ್ಕೆ ಮಾಸ್ತಿ ಪಿಎಸ್ಐ ಸಿದ್ದಪ್ಪ ಭೇಟಿ ನೀಡಿದ್ದರು.
ಶ್ರಮದಾನ
ತುಮಕೂರು: ತಾಲೂಕಿನ ಹೆಬ್ಬಾಕ, ಕಳಸೇಗೌಡನಪಾಳ್ಯ, ನರಸಾಪುರ ಗ್ರಾಮದಲ್ಲಿ ತುಮಕೂರಿನ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳ ವಾರ್ಷಿಕ ವಿಶೇಷ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಚರಂಡಿ ಸ್ವಚ್ಛತೆ, ಗ್ರಾಮ ನೈರ್ಮಲ್ಯ, ರಸ್ತೆ ನಿರ್ಮಾಣ, ಶೌಚಾಲಯಗಳ ಉಪಯೋಗ ಹಾಗೂ ಆರೋಗ್ಯ, ಮಾನವಿಯ ಮೌಲ್ಯಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ನೀಡಲಾಯಿತು. ಬರಡು ರಾಸುಗಳಿಗೆ ತಪಾಸಣೆ, ಕಾಲುಬಾಯಿ ರೋಗಕ್ಕೆ ಉಚಿತ ಲಸಿಕಾ ಶಿಬಿರ, ಮ್ಯಾಜಿಕ್ ಶೋ, ಆರೋಗ್ಯ ಮತ್ತು ಯುವಜನತೆ ಬಗ್ಗೆ ಉಪನ್ಯಾಸ, ಜಿಲ್ಲಾ ವಾರ್ತಾ ಇಲಾಖೆಯಿಂದ ಮನಸ್ವಿನಿ ಮತ್ತು ಏಡ್ಸ್ ಅರಿವಿನ ಕಿರುಚಿತ್ರ ಪ್ರದರ್ಶನವನ್ನು ಗ್ರಾಮಸ್ಥರು ಹಾಗೂ ಶಿಬಿರಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿತ್ತು.
ಜೀವನದಲ್ಲಿನ ಹಾಸ್ಯ, ಪರಿಸರ ಗೀತೆಗಳು, ಸಾಮಾಜಿಕ ಸಮಸ್ಯೆಗಳ ಬಗ್ಗೆ ಶಿಬಿರಾರ್ಥಿಗಳು ಕಿರುಚಿತ್ರ ಪ್ರದರ್ಶನ ಸೇರಿದಂತೆ ಮತ್ತಿತರವುಗಳನ್ನು ಪ್ರತಿ ಸಂಜೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮದಲ್ಲಿ ಶಿಬಿರಾರ್ಥಿಗಳು ಜಾಗೃತಿ, ಶ್ರಮದಾನ ಸೇರಿದಂತೆ ವಿವಿಧ ಸೇವೆಗಳನ್ನು ನೀಡಿದ್ದರಿಂದ ಗ್ರಾಮಸ್ಥರರ ಮೆಚ್ಚುಗೆಗೆ ಪಾತ್ರರಾದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎಲ್. ವೈದ್ಯೇಶ್ವರ್ ಅವರು ಮಾತನಾಡಿ ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಜೀವನದಲ್ಲಿ ವ್ಯಕ್ತಿತ್ವ ವಿಕಸನ, ಶಿಸ್ತು, ಸಮಯ ಪ್ರಜ್ಞೆ, ಗ್ರಾಮೀಣ ಜೀವನದಲ್ಲಿನ ಸಮಸ್ಯೆಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದರು.