ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಿಬಿಐಟಿಯಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರ

Rashmi Kasaragodu
Updated On : 20 Feb 2014, 2:36 am

ಕ.ಪ್ರ. ವಾರ್ತೆ    ಕೋಲಾರ    ಫೆ.19
ಅಖಂಡ ಕೋಲಾರ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಲು ಮಾಜಿ ಸಚಿವ ದಿ.ಸಿ. ಬೈರೇಗೌಡರು ಉದ್ದೇಶಿಸಿದ್ದರು. ಇವರ ಕನಸು ನನಸಾಗಿಸಲು ಸಿ. ಬೈರೇಗೌಡ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಲಾಗಿದ್ದು, ಫೆ.23ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಕೆ. ಶ್ರೀನಿವಾಸಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೇಮಗಲ್ ಹೋಬಳಿಯ ಸೀತಿ ಗ್ರಾಮದಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪಿಸಲು ಸಿ. ಬೈರೇಗೌಡರು ಪ್ರಯತ್ನಿಸಿದ್ದರು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ, ಅವರ ಆಸೆಯನ್ನು ಈಡೇರಿಸಲೆಂದೇ ಸಿಬಿಐಟಿ ಸ್ಥಾಪಿಸಲಾಗಿದ್ದು, ಈಗ ಮಹಾವಿದ್ಯಾಲಯದಲ್ಲಿನ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು 5ನೇ ತರಗತಿಯಿಂದ ಪಿಯುವರೆಗೆ ಓದಿ ನಿರುದ್ಯೋಗಿಗಳಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಯುವಕರಿಗೆ ಸುಮಾರು 300 ವಿಷಯಗಳಲ್ಲಿ ವೃತ್ತಿಪರ ಕೌಶಲ್ಯ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.23 ರಂದು ಶ್ರೀನಿವಾಸಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಮ್ಮ ಸಂಸ್ಥೆಗೆ ಬಂದು ಬೆಳಿಗ್ಗೆ 10 ಗಂಟೆಗೆ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಲಿದ್ದಾರೆಂದರು.
ಸಿಬಿಐಟಿಯ ಖಜಾಂಚಿ ಡಾ. ಪ್ರಭಾಕರರೆಡ್ಡಿ ಮಾತನಾಡಿ, ಮಾರ್ಚ್ 1 ರಿಂದ ತರಬೇತಿ ಆರಂಭವಾಗಲಿದೆ, ಸುಮಾರು 2 ಸಾವಿರ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ, ತರಬೇತಿ ಉಚಿತವಾಗಿ ನೀಡಲಾಗುತ್ತಿದ್ದು ಅಭ್ಯರ್ಥಿಗಳು ಎನ್ಸಿವಿಟಿಯಿಂದ ನಡೆಯುವ ಪರೀಕ್ಷೆಗೆ 800 ರು.ಶುಲ್ಕ ನೀಡಬೇಕಾಗುತ್ತದೆ, ತರಬೇತಿ ಪಡೆಯುವವರಿಗೆ ಎನ್ಸಿವಿಟಿಯಿಂದಲೇ ಉದ್ಯೋಗರ್ಹತ ಪ್ರಮಾಣ ಪತ್ರ ನೀಡಲಾಗುತ್ತದೆ, ಇದರಿಂದ ತರಬೇತಿ ಹೊಂದಿದವರು ಸ್ವಯಂ ಉದ್ಯೋಗಕ್ಕಾಗಿ ಬ್ಯಾಂಕುಗಳಿಂದ ಸಾಲ ಪಡೆಯಲು ಅನುಕೂಲವಾಗುತ್ತದೆ ಎಂದರು.
ಸಿಬಿಐಟಿಯಲ್ಲಿನ ಪರಿಣಿತರಿಂದ ತರಬೇತಿ ಕಲ್ಪಿಸಲಾಗುತ್ತದೆ, ಗುಣಮಟ್ಟದ ತರಬೇತಿಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತದೆ, ಟಿವಿ, ಮೊಬೈಲ್, ಟ್ರ್ಯಾಕ್ಟರ್, ವೆಲ್ಡಿಂಗ್, ಕಾರ್ಪೆಂಟರಿ, ಭೂಮಾಪನ ಕಲೆ, ಗಾರೆಕೆಲಸ, ಕಂಪ್ಯೂಟರ್, ಸಾಪ್ಟ್ವೇರ್ ಅಭಿವೃದ್ಧಿ, ವೆಬ್ ಡೆವಲಪ್ಮೆಂಟ್, ಮಾಹಿತಿ ತಂತ್ರಜ್ಞಾನ ಮತ್ತಿತರ ವೃತ್ತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವೃತ್ತಿಪರ ಕೌಶಲ್ಯ ತರಬೇತಿ ನೀಡಲಾಗುವುದೆಂದು ತಿಳಿಸಿದರು.
ಸಿಬಿಐಟಿಯಲ್ಲಿ ಮೊದಲ ಬ್ಯಾಚ್ ಮುಗಿದಿದ್ದು ಶೇ.100 ಫಲಿತಾಂಶ ಬಂದಿದೆ, 172 ವಿದ್ಯಾರ್ಥಿಗಳ ಪೈಕಿ 149 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ, ತಾಂತ್ರಿಕ ವಿದ್ಯಾಭ್ಯಾಸದ ಜೊತೆಗೆ ನಮ್ಮ ಸಂಸ್ಥೆಯು ನಿರುದ್ಯೋಗಿ ಯುವಕರನ್ನು ಗಮನದಲ್ಲಿಟ್ಟುಕೊಂಡು ವೃತ್ತಿಪರ ಕೌಶಲ್ಯ ತರಬೇತಿ ನೀಡಲು ಸಿದ್ಧತೆ ಮಾಡಿಕೊಂಡಿದ್ದು ಇದರ ಪ್ರಯೋಜನ ಪಡೆಯುವ ಮೂಲಕ ಉತ್ತಮ ಜೀವನ ಸಾಗಿಸಬೇಕೆಂದು ಅವರು ಕರೆ ನೀಡಿದರು. ಸಿಬಿಐಟಿಯ ಕಾರ್ಯದರ್ಶಿ ಕೃಷ್ಣಾರೆಡ್ಡಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement