ಸುವರ್ಣ ಮಹೋತ್ಸವಕ್ಕೆ ಸಕಲ ಸಿದ್ಧತೆ
ಕೋಲಾರ: ಶ್ರೀನಿವಾಸಪುರ ತಾಲೂಕಿನ ದಳಸನೂರು ಗ್ರಾಮದ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಲ್. ಗೋಪಾಲಕೃಷ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ.23 ರಂದು ನಡೆಯಲಿರುವ ಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ರಂಗಮಂದಿರಕ್ಕೆ ಶಂಕುಸ್ಥಾಪನೆ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸರ್ಕಾರಿ ಪ್ರೌಢಶಾಲಾ ಹೆಚ್ಚುವರಿ ಕೊಠಡಿಗಳ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆಂದು ವಿವರಿಸಿದರು.
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಸಮ್ಮಿಲನ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ, ಕಾರ್ಮಿಕ ಸಚಿವ ಪರಮೇಶ್ವರ್ ನಾಯ್ಕ್ ಅವರು ಗ್ರಾಮಕ್ಕೆ ಸರ್ಕಾರಿ ಐಟಿಐ ತರಬೇತಿ ಸಂಸ್ಥೆ ಮಂಜೂರು ಮಾಡಿದ್ದು ಇದಕ್ಕೂ ಅಂದೇ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಈ ಹಿಂದೆ ಗ್ರಾಮದ ರುದ್ರಪ್ಪ ಮತ್ತು ವೆಂಕಟಶೆಟ್ಟಿ ಅವರ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲೆಗೆ ಸ್ವಂತ ಕಟ್ಟಡ ಕಲ್ಪಿಸಲು ಗ್ರಾಮಸ್ಥರೆಲ್ಲಾ ಒಗ್ಗೂಡಿ 4 ಎಕರೆ ಜಮೀನಿನಲ್ಲಿ 8 ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದು ಶಾಲೆ ಈಗ 50 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ ಎಂದರು. ಈ ಶಾಲೆಯಲ್ಲಿ 4,800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದು ವಿವಿಧ ಕ್ಷೇತ್ರಗಳ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಸುತ್ತಮುತ್ತಲಿನ 52 ಹಳ್ಳಿಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದು ವಿವಿಧ ಕಡೆ ನೆಲಸಿರುವುದರಿಂದ ಅವರನ್ನೆಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸಲು ಪ್ರಯತ್ನಿಸಲಾಗುತ್ತಿದೆ, ಇದೊಂದು ನಮಗೆ ದೊಡ್ಡ ಸವಾಲಾಗಿದೆ ಎಂದು ಹೇಳಿದರು. ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹೀರಣ್ಯ ಗೌಡರ ಕುಟುಂಬದಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿ ಪದಕಗಳನ್ನು ವಿತರಿಸುತ್ತಿದ್ದಾರೆ ಎಂದು ತಿಳಿಸಿದರು. ಗುತ್ತಿಗೆದಾರ ವಿ. ಕೃಷ್ಣಾರೆಡ್ಡಿ, ನಾಗಭೂಷಣ್ರೆಡ್ಡಿ, ಸುಧಾಕರ್, ವೀರಭದ್ರಸ್ವಾಮಿ ಇದ್ದರು.
ಶೀಘ್ರದಲ್ಲೇ ಟಿಕೆಟ್ ಕೌಂಟರ್: ಶಾಸಕ
ಟೇಕಲ್: ಮರಲಹಳ್ಳಿ ಗ್ರಾಮದಲ್ಲಿ ಹೊಸ ರೈಲು ನಿಲ್ದಾಣ ಹಾಗೂ ಟಿಕೆಟ್ ಕೌಂಟರ್ ಸ್ಥಾಪಿಸಲು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಬಳಿ ಎರಡು ಬಾರಿ ಚರ್ಚಿಸಲಾಗಿದ್ದು ಪ್ರಯೋಜನವಾಗದೆ ಇದೀಗ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಶಾಸಕ ಕೆ.ಎಸ್. ಮಂಜುನಾಥಗೌಡ ತಿಳಿಸಿದರು.
ಮರಲಹಳ್ಳಿ ಗ್ರಾಮದಲ್ಲಿ ಗಂಗಮ್ಮದೇವಿ ಜಾತ್ರಾ ದೀಪೋತ್ಸವ ಮತ್ತು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಮಾಲೂರು ತಾಲೂಕಿನ ಪ್ರತಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡರು ಮಾತನಾಡಿ, ಜಿಪಂನಿಂದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಗ್ರಾಮಕ್ಕೆ ನೀರು ಕೊಡಲಾಗುತ್ತಿದೆ ಎಂದರು. ರಮೇಶ್ ರಾವ್ ಮಾತನಾಡಿದರು. ತಾಪಂ ಸದಸ್ಯೆ ನಿರ್ಮಲಾಆಂಜಿನಪ್ಪ, ನೀಲಮ್ಮ ನಾರಾಯಣಸ್ವಾಮಿ, ಹನುಮಂತಪ್ಪ, ಪುರಸಭಾ ಸದಸ್ಯ ಜಾಕೀರ್, ರಾಮಕೃಷ್ಣಪ್ಪ, ಎಂ.ಎ. ರಾಮಕೃಷ್ಣಪ್ಪ, ಎಸ್.ಜಿ. ರಾಮಮೂರ್ತಿ ಇದ್ದರು. ಇದೇ ಸಂದರ್ಭದಲ್ಲಿ ಗಂಗಮ್ಮ ದೇವಿಗೆ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಯಿತು.