ಕಳ್ಳರ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಶಿಡ್ಲಘಟ್ಟ: ತಾಲೂಕಿನ ಕನ್ನಪ್ಪನಹಳ್ಳಿಯಲ್ಲಿ ಕೇಬಲ್, ಪ್ಯಾನಲ್ ಬೋರ್ಡ್ ಕಳ್ಳತನ ಹೆಚ್ಚಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಗ್ರಾಮಸ್ಥರು ಗ್ರಾಮಾಂತರ ಠಾಣೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಗ್ರಾಮದ ಹತ್ತು ಕೊಳವೆ ಬಾವಿಗಳಲ್ಲಿ ಕೇಬಲ್ಗಳನ್ನು ಕಳ್ಳತನ ಮಾಡಲಾಗಿದೆ. ನೀರು ಮತ್ತು ವಿದ್ಯುತ್ ಅಭಾವದಿಂದ ರೈತರು ಪರದಾಡುತ್ತಿದ್ದು, ಬೆಳೆ ಕೈಗೆ ಬರುವ ಹಂತದಲ್ಲಿರುವಾಗ ಕಳ್ಳತನವಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಪೊಲೀಸರು ಕಳ್ಳರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಗ್ರಾಮಾಂತರ ಠಾಣೆ ಸಬ್ಇನ್ಸ್ಪೆಕ್ಟರ್ ಹನುಮಂತಪ್ಪ ಮಾತನಾಡಿ, ಕನ್ನಪ್ಪನಹಳ್ಳಿ ಗ್ರಾಮ ದಿಬ್ಬೂರಹಳ್ಳಿ ಠಾಣಾ ವ್ಯಾಪ್ತಿಗೆ ಬರುತ್ತದೆ. ತಾಲೂಕಿನ ಇದ್ಲೂಡಿನ ಬಳಿ ಆಟೋದಲ್ಲಿ ಕೇಬಲ್ ಸಾಗಿಸುತ್ತಿದ್ದ ಬಾಬಾಜಾನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದೇವೆ. ಆ ಸಂಬಂಧ ಇನ್ನೂ ತನಿಖೆ ಜಾರಿಯಲ್ಲಿದೆ ಎಂದು ಹೇಳಿದ ನಂತರ ಪ್ರತಿಭಟನಾಕಾರರು ಹಿಂದಿರುಗಿದರು. ಶಿವಣ್ಣ, ಲಕ್ಷ್ಮೀನಾರಾಯಣ, ಆದಿನಾರಾಯಣಸ್ವಾಮಿ ಭಾಗವಹಿಸಿದ್ದರು.
ರಾಜೀವ್ ಹಂತಕರ ಬಿಡುಗಡೆ ವಿರೋಧಿಸಿ ಪ್ರತಿಭಟನೆ
ಕೋಲಾರ: ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಹಂತಕರ ಬಿಡುಗಡೆ ಮಾಡಲು ಶಿಫಾರಸ್ಸು ಮಾಡಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತರವರ ನಿರ್ಣಯವನ್ನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ಯುವ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಯಿತು.
ಸಮಿತಿ ಅಧ್ಯಕ್ಷ ಶಾಹೀದ್ ಶಹಜಾದ್ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಕುಮಾರ್ ರಾಜ್ ಅವರಿಗೆ ಮನವಿ ಸಲ್ಲಿಸಿ, ರಾಜೀವ್ ಗಾಂಧಿಯವರನ್ನು ಕೊಂದ ಹಂತಕರಿಗೆ ತಕ್ಕ ಶಿಕ್ಷೆ ಆಗಬೇಕೆಂಬುದು ದೇಶದ ಜನತೆಯ ಒತ್ತಾಸೆಯಾಗಿದ್ದರೆ, ಜಯಲಿಲತ ಅವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಅಪರಾಧಿಗಳ ರಕ್ಷಣೆಗೆ ಮುಂದಾಗಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೊಹಮದ್ ಆಯಾಜ್, ಪಾಪಿರೆಡ್ಡಿ, ಪ್ರಧಾನ ಕಾರ್ಯದರ್ಶಿ ಸುಭಾಷ್, ಕೋಲಾರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಬಿ.ಟಿ. ಮಂಜುನಾಥ್, ಮುಳಬಾಗಿಲು ತಾಲೂಕು ಅಧ್ಯಕ್ಷ ಜಗದೀಶ್, ಚಿಂತಾಮಣಿ ಬುಡೇನ್, ನಸೀರ್ ಬಂಗಾರಪೇಟೆ, ಪ್ರಧಾನ ಕಾರ್ಯದರ್ಶಿಗಳಾದ ಅಜಂ, ಜುಬೀ, ಶ್ರೀನಾಥ್, ಸಾದಿಕ್ ಇದ್ದರು.