ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚಿಕ್ಕಬಳ್ಳಾಪುರ ನಗರಸಭೆ ಕಾರ್ಯನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದ ಭೂತಾನ್ ತಂಡ

Rashmi Kasaragodu
Updated On : 21 Feb 2014, 1:39 am

ಚಿಕ್ಕಬಳ್ಳಾಪುರ: ಸ್ಥಳೀಯ ಆಡಳಿತ ಸಂಸ್ಥೆ ನಗರಸಭೆಯ ಕಾರ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ವಿವಿಧ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದರ ಸಲುವಾಗಿ ನೆರೆಯ ರಾಷ್ಟ್ರ ಭೂತಾನ್ ದೇಶದಿಂದ 9 ಮಂದಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ತಂಡ ಇಲ್ಲಿನ ನಗರಸಭೆಗೆ ಗುರುವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿತು.
ಭೂತಾನ್ ರಾಷ್ಟ್ರದಲ್ಲಿ ರಾಜಪ್ರಭುತ್ವ ಹೋಗಿ ಪ್ರಜಾಪ್ರಭುತ್ವದ ಆಧಾರದ ಮೇಲೆ ಚುನಾವಣೆಗಳು ನಡೆದು ಭಾರಿ ಬದಲಾವಣೆಯಾಗಿದ್ದು, ಇಲ್ಲಿನ ಸ್ಥಳೀಯ ಆಡಳಿತ ಸಂಸ್ಥೆಗಳ ಕಾರ್ಯ ನಿರ್ವಹಣೆ ಬಗ್ಗೆ ತಿಳಿದು ಸೂಕ್ತ ಅಂಶಗಳನ್ನು ತಮ್ಮ ರಾಷ್ಟ್ರದಲ್ಲಿ ಅನ್ವಯ ಮಾಡಿಕೊಳ್ಳುವ ಉದ್ದೇಶದಿಂದ ಭೂತಾನ್ ರಾಷ್ಟ್ರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಕಾರ್ಯಪಾಲ ಅಭಿಯಂತರರು, ಆರ್ಥಿಕ ನಿರ್ವಹಣಾಧಿಕಾರಿಗಳು, ವಿಶ್ವಬ್ಯಾಂಕಿನ ಸಂಯೋಜಕರು, ಕಾರ್ಯಕ್ರಮಾಧಿಕಾರಿಗಳು ಮತ್ತು ಯೋಜನಾ ನಿರ್ದೇಶಕರನ್ನೊಳಗೊಂಡ ಅತಿಥಿಗಳು ನವದೆಹಲಿಯ ಸಮಾಜ ವಿಜ್ಞಾನ ಸಂಸ್ಥೆಯ ಅಧಿಕಾರಿಗಳ ಜೊತೆ ಆಗಮಿಸಿದ್ದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನಾಗರಾಜ್ ಶೆಟ್ಟಿ ಮತ್ತು ನಗರಸಭೆ ಸಿಬ್ಬಂದಿ ಅತಿಥಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡರು. ಪ್ರಾರಂಭದಲ್ಲಿ ಪೌರಾಯುಕ್ತ ಮುನಿಸ್ವಾಮಿ ನಗರಸಭೆಯ ಅಂಕಿ ಅಂಶಗಳನ್ನು ಮತ್ತು ಕಾರ್ಯ ನಿರ್ವಹಣೆ ವಿಧಾನವನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದರು.
ನಗರಸಭೆಯಲ್ಲಿ ಜನನ ಮತ್ತು ಮರಣ ನೋಂದಣಿ, ತೆರಿಗೆ ಸಂಗ್ರಹ, ದಾಖಲಾತಿ ನಿರ್ವಹಣೆ, ಸಿಬ್ಬಂದಿ ಜವಾಬ್ದಾರಿ ಅದರಲ್ಲೂ ಜನರಿಗೆ ಆನ್ ಲೈನ್ ಮೂಲಕ ಸೇವೆ ಮತ್ತು ಮಾಹಿತಿಯನ್ನು ಕೊಡುವುದರ ಬಗ್ಗೆ ತಿಳಿಸಿದರು. ನಗರಸಭೆಗೆ ಸದಸ್ಯರ ಚುನಾವಣೆ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ, ಜವಾಬ್ದಾರಿಗಳು ಮತ್ತು ಅಧಿಕಾರಿಗಳ ಕೆಲಸ, ಆಡಳಿತದ ವ್ಯಾಪ್ತಿ, ಪೌರಾಡಳಿತ ನಿರ್ದೇಶನಾಲಯ ಮೇಲುಸ್ತುವಾರಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆಯೂ ತಿಳಿಸಿದರು.
ಕೊನೆಯಲ್ಲಿ ಮಾತನಾಡಿದ ಮೇಯರ್ ಕೈನ್ಲಿ ಡಾರ್ಜಿ, ಭಾರತ ದೇಶದಲ್ಲಿನ ಆಡಳಿತ ವ್ಯವಸ್ಥೆ ಜನರಿಗೆ ಅನುಕೂಲವಾಗುವಂತಿದ್ದು ಇಲ್ಲಿನ ನೀತಿಗಳನ್ನು ತಮ್ಮ ರಾಷ್ಟ್ರದಲ್ಲೂ ಅನ್ವಯ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ತಂಡದಲ್ಲಿ ಡಾಶೋ ಡಾ. ಸೊನಾಮ್, ಹರಕ ಎಸ್ಟಿ ಟಮಂಗ್, ಚೊಪೇಲ್ ಡಾರ್ಜಿ, ತೆಸ್ಟನ್ ಲೆಹೆಡುಪ್, ಆನಂದ್ ಮ್ಯಾಥ್ಯು, ಜೋಶೇ ಜೋಸ್ ಮುಂತಾದವರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement