ನಾರುತ್ತಿರುವ ದೇಶದ ಸ್ವಚ್ಛತೆಗೆ ಹೋರಾಡಿ
ಕನ್ನಡಪ್ರಭ ವಾರ್ತೆ ಕೋಲಾರ ಫೆ.20
ಗುಜರಿ ಸೆಮಿನಾರ್ಗಳನ್ನು ನಡೆಸುವುದರಿಂದ, ಅರ್ಥವಿಲ್ಲದ ಪಾಂಪ್ಲೆಟ್ ಮುದ್ರಿಸಿ ಹಂಚುವುದರಿಂದ ದಲಿತ ಚಳವಳಿ ಪುನರುತ್ಥಾನಗೊಳ್ಳುತ್ತದೆ ಎಂಬುದು ಕೇವಲ ಭ್ರಮೆ. ಪೊರಕೆ, ಗುದ್ದಲಿ ಹಿಡಿದು ಶೌಚಾಲಯದಂತಾಗಿರುವ ದೇಶವನ್ನು ಸ್ವಚ್ಛಗೊಳಿಸಲು ಎಲ್ಲ ತಳ ಸಮುದಾಯದವರು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಅಂಬೇಡ್ಕರ್ ಆಶಯಗಳು ಈಡೇರುತ್ತವೆ ಎಂದು ಆದಿಮ ಸಾಂಸ್ಕೃತಿಕ ಸಂಘಟನೆಯ ರೂವಾರಿ, ಹಿರಿಯ ರಂಗಕರ್ಮಿ ಹಾಗೂ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಪ್ರತಿಪಾದಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳ ಕಾಲ ಬಹುಸಂಖ್ಯಾತರಾದ ನಾವು ಶೌಚಾಲಯಗಳನ್ನು ತೊಳದೇ ಜೀವನ ಸಾಗಿಸಿದ್ದೇವೆ. ಈಗ ಶೌಚಾಲಯದಂತಾಗಿರುವ ದೇಶವನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ದಲಿತ ಸಂಘಟನೆಗಳಿಗೆ ಕಿವಿಮಾತು ಹೇಳಿದರು.
ಅಂಬೇಡ್ಕರ್ ಅವರ ಹೋರಾಟದ ಫಲದಿಂದಾಗಿ ಶೋಷಿತ ಸಮುದಾಯಕ್ಕೆ ತಲೆ ಎತ್ತಿ ನಡೆಯಲು ಒಂದಿಷ್ಟು ಅವಕಾಶ ಸಿಕ್ಕಿದೆ. ಆದರೆ, ಸ್ವಾರ್ಥಕ್ಕಾಗಿ ಕೆಲವರು ಸಂಘಟನೆಗಳನ್ನು ಕಟ್ಟಿಕೊಂಡು ದಲಿತ ಚಳವಳಿಯ ಮೂಲ ಉದ್ದೇಶಕ್ಕೆ ಅಪಚಾರವೆಸಗಿದ್ದಾರೆಂದು ಟೀಕಿಸಿದರು. ದಲಿತ ಸಂಘಟನೆಗಳ ಮುಖಂಡರಲ್ಲಿನ ಸ್ವಾರ್ಥ,ಅವಕಾಶವಾದಿತನದಿಂದಾಗಿ ಬೇರೆಯವರು ಲಾಭ ಪಡೆದುಕೊಂಡಿದ್ದಾರೆ, ಸಂಘಟನೆಯ ಆಶಯಗಳಿಗೆ ಸಗಣಿ ನೀರಾಕಿ ಚಳವಳಿಯವನ್ನು ದಮನಗೊಳಿಸಿದ್ದಾರೆ. ಇಂತಹ ಜನರೊಟ್ಟಿಗೆ ರಾಜಿ ಮಾಡಿಕೊಂಡು ಸಮುದಾಯಕ್ಕೆ ಮಾತ್ರವಲ್ಲದೆ ದೇಶದ ಅಭಿವೃದ್ಧಿಗೆ ಧಕ್ಕೆ ತರಲಾಗುತ್ತಿದೆ ಎಂದು ವಿಷಾಧಿಸಿದರು.
ಕೋಮುವಾದಿ ವಿಷ ಬೀಜ ಬಿತ್ತಿ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿರುವ ಆರ್ಎಸ್ಎಸ್ ಬಗ್ಗೆ ಜನತೆ ಜಾಗೃತಗೊಳ್ಳದಿದ್ದರೆ ದೇಶ ಕೇವಲ 50 ಜನರಿಗಾಗಿಯೇ ಉಳಿಯಬೇಕಾಗುತ್ತದೆ, ಅವರಿಂದಲೇ ದೇಶಕ್ಕೆ ಅಪತ್ತು ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.