ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯುವಜನರಿಂದ ದಸಂಸ ಬಲಗೊಳಿಸಬೇಕಿದೆ

Rashmi Kasaragodu
Updated On : 21 Feb 2014, 1:40 am

ಕೋಲಾರ: ವಿದ್ಯಾರ್ಥಿಗಳು ಮತ್ತು ಯುವಜನರ ಮೂಲಕ ಛಿದ್ರಗೊಂಡಿರುವ ದಲಿತ ಸಂಘರ್ಷ ಸಮಿತಿಯನ್ನು ಪುನಶ್ಚೇತನಗೊಳಿಸಬೇಕಾಗಿದೆ ಎಂದು ಸಾಹಿತಿ ದೇವನೂರು ಮಹದೇವ ತಿಳಿಸಿದರು.
ಕೋಲಾರದಲ್ಲಿ ಜಿಲ್ಲಾ ದಸಂಸ ಗುರುವಾರ ಹಮ್ಮಿಕೊಂಡಿದ್ದ ಭಾರತದ ಬಹುಸಂಸ್ಕೃತಿ ಮೇಲೆ ಫ್ಯಾಸಿಸಂ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ದಲಿತ ಚಳುವಳಿಗೆ ಚೈತನ್ಯ ನೀಡಿದ ಕೋಲಾರ ಜಿಲ್ಲೆಯಲ್ಲಿ ಕಾರಣಾಂತರಗಳಿಂದ ಗುಂಪುಗಳಾಗಿ ಮಾರ್ಪಟ್ಟಿದೆ, ವೈರುಧ್ಯಗಳಿಂದಾಗಿ ಲೆಕ್ಕವಿಲ್ಲದಷ್ಟು ದಸಂಸ ಆಗಿದೆ ಎಂದು ವಿಷಾಧಿಸಿದ ಅವರು, ಹಲವು ಗುಂಪುಗಳು ಆಗಿದ್ದರೂ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವವರು ಯಾವುದೇ ಜಾತಿ ಅಥವಾ ಮತಿಯ ಸಂಘಟನೆಗಳ ಜೊತೆ ನೆಂಟು ಇಟ್ಟುಕೊಳ್ಳದಿರುವುದು ಸಮಾಧಾನ ತಂದಿದೆಯಾದರೂ ಗುಂಪುಗಾರಿಕೆ ಆತಂಕಕ್ಕೆ ಎಡೆ ಮಾಡಿದೆ ಎಂದರು.
ಛಿದ್ರಗೊಂಡಿರುವ ಸಂಘಟನೆ ಒಟ್ಟು ಮಾಡುವುದು ಕಷ್ಟ. ಆದರೆ, ಒಗ್ಗೂಡಿಸಿ ಕೆಲಸ ಮಾಡಿಸಬೇಕಾಗಿದೆ, ಇದಕ್ಕೆ ವಿದ್ಯಾರ್ಥಿಗಳು ಮತ್ತು ಯುವಜನರ ಬೆಂಬಲ ಅಗತ್ಯವೆಂದು ಅಭಿಪ್ರಾಯಪಟ್ಟರು. ಸಂಘಟನೆಯಲ್ಲಿ ಜಿಲ್ಲಾ ಮತ್ತು ರಾಜ್ಯ ಸಂಚಾಲಕರಾಗಿ ಕೆಲಸ ಮಾಡಿ ಇದೀಗ ನಮಗೂ ಸಂಘಟನೆಗೂ ಯಾವುದೇ ಸಂಬಂಧವಿಲ್ಲವೆಂದು ದೂರ ಸರಿದಿರುವವರಿಗೆ ಒಂದು ಹಳ್ಳಿಯ ಜವಾಬ್ದಾರಿ ವಹಿಸಲು ಬೈಲಾದಲ್ಲಿ ತಿದ್ದುಪಡಿ ಆಗಬೇಕಾಗಿದೆ. ಹಳ್ಳಿಯ ಸಂಚಾಲಕರಾಗುವವರು ತಳ ಸಮುದಾಯದವಲ್ಲದೆ ಎಲ್ಲ ವರ್ಗದ ಜನತೆಯ ಹಿತ ಕಾಪಾಯುವ ಮೂಲಕ ಸಮಾನತೆ ಮತ್ತು ಸೌಹಾರ್ದತೆಗಾಗಿ ಕೆಲಸ ಮಾಡುವಂತಾದರೆ ಸಮಾಜದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಲು ಅನುಕೂಲವಾಗುತ್ತದೆ ಎಂದರು. ದಲಿತ ಸಂಘಟನೆಗಳ ಮುಖಂಡರು ಎಲ್ಲ ಸಮುದಾಯಗಳ ಹಿತ ಕಾಪಾಡಬೇಕು, ಒಂದು ವೇಳೆ ಆರ್ಎಸ್ಎಸ್ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದರೆ ದಲಿತರು ಮತಾಂಧತೆಯ ಪ್ರತಿಪಾದಕರೆಂದೇ ಭಾವಿಸಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮತಾಂಧತೆ ಮನುಷ್ಯತ್ವವನ್ನು ತಿನ್ನುತ್ತದೆ, ತನ್ನ ಕಣ್ಣು ಕಿತ್ತು ಮತಾಂಧತೆ ಮಾಡುತ್ತದೆ, ಮೆದಳು ಮತ್ತು ವಿವೇಕ ಕಣ್ಣು ಆಗುತ್ತೆ, ಹೃದಯ ಕಿತ್ತು ಕ್ರೂರಿ ಮಾಡುತ್ತದೆ. ಹಾಗಾಗಿ ಮತಾಂಧತೆಯ ದವಡೆಯಿಂದ ಹೊರಬರಬೇಕಾಗಿದೆ. ಪ್ರಗತಿಪರರು ಫಸಲು ವಿರೋಧಿಸುತ್ತಿದ್ದಾರೆಯೇ ಹೊರತು ಐಕ್ಯತೆಯನ್ನು ಬಿತ್ತಲು ಸೋತಿದ್ದಾರೆಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಜಲತಜ್ಞ ಪ್ರೊ. ನಾರಾಯಣಸ್ವಾಮಿ, ಪತ್ರಕರ್ತ ಕೆ.ಎಸ್. ಗಣೇಶ್, ವಿಶ್ವಕುಂದಾಪುರ ಅವರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement