ವರ್ಗಾವಣೆಗೊಂಡ ಅಧಿಕಾರಿಗೆ ಬೀಳ್ಕೊಡುಗೆ
ಬಂಗಾರಪೇಟೆ: ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಜೆಇ ಆಗಿ ಹಲವು ದಶಕಗಳಿಂದ ಕಾರ್ಯ ನಿರ್ವಹಿಸಿ ದಕ್ಷ ಅಧಿಕಾರಿ ಎಂದು ಹೆಸರು ಪಡೆದಿದ್ದ ಹುಸೇನಿರವರಿಗೆ ರಾಜ್ಯ ಸರ್ಕಾರ ಎಇಇ ಆಗಿ ಬಡ್ತಿ ನೀಡಿ ಹಾಸನ ಜಿಲ್ಲೆಗೆ ವರ್ಗಾಯಿಸಿದೆ.
ಹುಸೇನಿ ಅವರು ಕಚೇರಿಯಲ್ಲಿ ಎಲ್ಲಾ ಕಡತಗಳನ್ನು ಕನ್ನಡದಲ್ಲೆ ವ್ಯವಹರಿಸುವ ಮೂಲಕ ಕನ್ನಡ ಪ್ರೇಮಿಯೂ ಆಗಿದ್ದರು. ಅಲ್ಲದೆ ಸಾರ್ವಜನಿಕರು ಇಲಾಖೆ ಬಗ್ಗೆ ಇರುವ ಹಲವು ತೊಂದರೆಗಳಿಗೆ ಇವರ ಬಳಿ ಹೋದರೆ ತಕ್ಷಣ ವಿಲೇವಾರಿ ಮಾಡಿಕೊಡುತ್ತಿದ್ದರಿಂದ ಎಲ್ಲರಿಂದ ಪ್ರಶಂಸೆಗ ಪಾತ್ರರಾಗಿದ್ದರು.
ಇಂತಹ ಸರಳ ಅಧಿಕಾರಿಗೆ ಜೆಇಯಿಂದ ಎಇಇಗೆ ಬಡ್ತಿ ಸಿಕ್ಕಿರುವುದು ಇಲಾಖೆ ಇತರೆ ಅಧಿಕಾರಿಗಳಲ್ಲಿ ಹಾಗೂ ನೌಕರರಲ್ಲಿ ಸಂತಸ ಉಂಟು ಮಾಡಿದೆ. ಹುಸೇನಿರವರಿಗೆ ಬೆಸ್ಕಾಂ ಇಲಾಖೆ ಸಿಬ್ಬಂದಿ ಪಟ್ಟಣದ ಶಾದಿಮಹಲ್ ಕಲ್ಯಾಣ ಮಂಟಪದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಂಡಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಇಇ ಹುಸೇನಿ ಅಧಿಕಾರಿಗಳು ಅಧಿಕಾರ ಸಿಕ್ಕಾಗ ವಿದ್ಯುತ್ ಗ್ರಾಹಕರನ್ನು ವಿನಾಕಾರಣ ಅಲೆಸದೆ ಅವರ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಈ ವೇಳೆ ಬೆಸ್ಕಾಂ ಎಇಇ ಚಲಪತಿ, ಕೆಜಿಎಪ್ ಎಇಇ ಲಕ್ಷ್ಮೀನಾರಾಯಣ, ಆಂಥೋನಿ ದಾಸ್, ಜೆಇ ಲಿಂಗರಾಜು ಇದ್ದರು.