ಹೇಳು ಕನಕಾಂಬರ ಏನು ನಿನ್ನ ಆಡಂಬರ?
ವಿ.ಡಿ. ಗಣೇಶ್
ಗೌರಿಬಿದನೂರು: ತಾಲೂಕಿನ ಕೋಟಾಲದಿನ್ನೆಯಲ್ಲಿ ಕನಕಾಂಬರ ಹೂವಿನ ವಿಶೇಷ ಮಾರುಕಟ್ಟೆಯಿದೆ. ಇಲ್ಲಿ ಪ್ರತಿದಿನ ಕನಕಾಂಬರ ಹೂವಿನದೇ ಕಾರುಬಾರು. ನೂರಾರು ರೈತ ಕುಟುಂಬಗಳ ಬದುಕಿನ ಬಂಡಿ ಸಾಗಿಸಲು ಕನಕಾಂಬರ ಹೂವು ಇಲ್ಲಿ ವರದಾನವಾಗಿದೆ.
ಹೂವುಗಳಿಗಂತೂ ವರ್ಷವಿಡೀ ಡಿಮ್ಯಾಂಡೊ ಡಿಮಾಂಡು. ದೇವತೆಗಳು ಮಾತ್ರವಲ್ಲದೇ ಹೆಂಗಳೆಯರ ಮನ ಗೆದ್ದ ಹೂವುಗಳಲ್ಲಿ ಕನಕಾಂಬರದ್ದು ಎತ್ತಿದ ಕೈ. ಎಲ್ಲ ಕಾರ್ಯಕ್ರಮಗಳಲ್ಲೂ ಬಳಸುವ ಕನಕಾಂಬರ ಹೂವಿಗೆ ಅಬ್ಬಲಿಗೆ, ಅಬೋಲಿಗೆ ಎಂಬ ಮರುನಾಮಗಳು ಇವೆ. ಸುವಾಸನೆ ರಹಿತವಾಗಿದ್ದರೂ ಕನಕಾಂಬರ ಮೂರ್ನಾಲ್ಕು ದಿನ ಬಾಡುವುದಿಲ್ಲ. ಜೊತೆಗೆ ಇದು ಮುಡಿಗೇರಿದ್ದರೂ ಹಗುರವಾಗಿರುವ ಕಾರಣ ಮಹಿಳೆಯರಿಗೆ ಬಲು ಅಚ್ಚುಮೆಚ್ಚು. ವರ್ಷವಿಡೀ ಕನಕಾಂಬರ ಬೆಳೆಯಬಹುದಾಗಿದ್ದು, ವಾರಕ್ಕೆ ಮೂರು ಭಾರಿ ಕೊಯ್ಲು ಮಾಡುತ್ತಾರೆ.
ಕೋಟಾಲದಿನ್ನೆಯ ಕನಕಾಂಬರ ಹೂವಿನ ಈ ವಿಶೇಷ ಮಾರುಕಟ್ಟೆಗೆ ಗೌರಿಬಿದನೂರು, ಕೊರಟಗೆರೆ ತಾಲೂಕುಗಳ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಹೂ ಪ್ರತಿನಿತ್ಯ ಬರುತ್ತದೆ. ಪ್ರತಿದಿನ ಬೆಳಗ್ಗೆ 9 ರಿಂದ 11 ರ ತನಕ ವ್ಯಾಪಾರ ವಹಿವಾಟು ನಡೆಯುವ ಈ ಮಾರುಕಟ್ಟೆಯಲ್ಲಿ ಸುಮಾರು 4 ರಿಂದ 5 ಸಾವಿರ ಕೆಜಿ ಕನಕಾಂಬರ ಹೂವು, ಬೆಂಗಳೂರು-ತುಮಕೂರುಗಳ ಹೂವಿನ ಮಾರುಕಟ್ಟೆಗೆ ಮಾರಾಟವಾಗುತ್ತದೆ.
ಕನಕಾಂಬರ ಹೂವಿನ ಪ್ರತಿ ಕೆ.ಜಿ.ಗೆ 150 ರುಪಾಯಿಗಳಿಂದ 1,000 ರುಪಾಯಿಗಳ ವರೆಗೂ ರೈತರಿಗೆ ಬೆಲೆ ಸಿಗುತ್ತದೆ.
ರೈತರು ತಮ್ಮದೇ ಆದ ಸ್ಥಳೀಯ ಕನಕಾಂಬರ ಹೂ ತಳಿಯನ್ನು ಬೆಳೆಯುತ್ತಾರೆ. ಸುಮಾರು 20 ವರ್ಷಗಳಿಂದ ನಡೆಯುತ್ತಿರುವ ಈ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ. ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ಕಟ್ಟಿಸಬೇಕು, ವಿದ್ಯುತ್ ಸಮಸ್ಯೆ, ನೀರಿನ ಸಮಸ್ಯೆ ಹೆಚ್ಚಿದ್ದು, ರೈತರಿಗೆ ಸಂಕಷ್ಟಗಳು ಎದುರಾಗಿವೆ. ಸರ್ಕಾರ ರೈತರಿಗೆ ಸೌಕರ್ಯಗಳನ್ನು ಒದಗಿಸಬೇಕೆಂದು ವರ್ತಕರು ಮತ್ತು ರೈತರು ಕೋರಿದ್ದಾರೆ.