ಕಾಲುಬಾಯಿ ರೋಗ ತಡೆಗೆ ಸೂಚನೆ
ಕೋಲಾರ: ಹೈನುಗಾರಿಕೆಯನ್ನು ಅವಲಂಭಿಸಿ ಜೀವನ ಸಾಗಿಸುತ್ತಿರುವ ರೈತರು ಕಾಲುಬಾಯಿ ಜ್ವರದಿಂದ ಹಸುಗಳು ಸಾಯುತ್ತಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ, ಬೇಸಿಗೆ ಆರಂಭವಾಗುತ್ತಿರುವುದರಿಂದ ಜಾನುವಾರುಗಳ ರಕ್ಷಣೆಗೆ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ ಸಚಿವ, ಶಾಸಕ ವರ್ತೂರ್ ಆರ್.ಪ್ರಕಾಶ್ ಪಶುಪಾಲನೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಶು ಪಾಲನೆ ಇಲಾಖೆಗೆ ಶುಕ್ರವಾರ ಹಠಾತ್ ಭೇಟಿ ನೀಡಿದ ಅವರು ಕಳೆದ ವರ್ಷ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಸತ್ತಿರುವ ಜಾನುವಾರುಗಳ ಕುರಿತು ಚರ್ಚಿಸಿದರಲ್ಲದೆ, ಸರ್ಕಾರದಿಂದ ಬಿಡುಗಡೆ ಆಗಿರುವ ಪರಿಹಾರ ಮತ್ತು ರೋಗ ತಡೆಗಟ್ಟಲು ಹಾಕಿಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಸಕಾಲಕ್ಕೆ ಮಳೆಯಿಲ್ಲದೆ ರೈತರು ಕಂಗಾಲು ಆಗಿದ್ದಾರೆ, ಬೆಳೆಗಳು ಇಲ್ಲದೆ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ, ಇದರ ಜೊತೆಗೆ ಕಾಲುಬಾಯಿ ಜ್ವರದಿಂದ ನೂರಾರು ಜಾನುವಾರುಗಳು ಸತ್ತಿದ್ದು ಇಂತಹ ಪರಿಸ್ಥಿತಿಯಲ್ಲಿ ಹೈನುಗಾರಿಕೆ ಉಳಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಹೈನುಗಾರಿಕೆಯಲ್ಲಿ ನಂ.1 ಸ್ಥಾನದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ರೈತರು ಲಕ್ಷಾಂತರ ರುಪಾಯಿ ಬೆಲೆ ಬಾಳುವ ಜಾನುವಾರುಗಳನ್ನು ಕಳೆದುಕೊಂಡಿದ್ದು, ಮುಂದೆ ಇದು ಮರಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದರು.
ಜಿಲ್ಲೆಯಲ್ಲಿ ಸುಮಾರು 3098 ಜಾನುವಾರುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಸತ್ತಿವೆ, ಈ ಪೈಕಿ ಕೋಲಾರ ತಾಲೂಕು ಒಂದರಲ್ಲೇ 1131 ಹಸುಗಳು ಸತ್ತಿವೆ, ಸರ್ಕಾರ ನೀಡುವ ಪರಿಹಾರ ಸಾಲದು, ಜಿಲ್ಲೆಯಲ್ಲಿ ಈಗ 6ನೇ ಸುತ್ತಿನ ಲಸಿಕೆ ಕಾರ್ಯಕ್ರಮ ಆರಂಭವಾಗಿದ್ದು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಎಚ್ಚರಿಸಿದರು. ಲಸಿಕೆ ಬಗ್ಗೆ ರೈತರಲ್ಲಿ ಇರುವ ಆತಂಕ ಹಾಗೂ ಮೂಢ ನಂಬಿಕೆ ನಿವಾರಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಿ ಕಡ್ಡಾಯವಾಗಿ ಲಸಿಕೆ ಹಾಕಬೇಕೆಂದು ತಿಳಿಸಿದರು.
ತಾಲೂಕಿನಲ್ಲಿ ಆಡಳಿತ ಸತ್ತು ಹೋಗಿದೆ, ಇಲಾಖೆಗಳಲ್ಲಿ ಸರಿಯಾಗಿ ಕೆಲಸಗಳು ನಡೆಯುತ್ತಿಲ್ಲ, ಬಾಯಿಲ್ಲದ ಜೀವಗಳು ನಿಮ್ಮ ಇಲಾಖೆಗೆ ಬರುವುದರಿಂದ ಕನಿಷ್ಠ ನೀವಾದರೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಉಪ ನಿರ್ದೇಶಕರು ಸೇರಿದಂತೆ ಇಲಾಖೆಯ ಎಲ್ಲ ಅಧಿಕಾರಿಗಳು ತಾಲೂಕು ಮತ್ತು ಹೋಬಳಿಗಳಿಗೆ ಭೇಟಿ ನೀಡಿ ರೈತರ ಕಷ್ಟ ವಿಚಾರಿಸಿ ಪರಿಹಾರ ಸೂಚಿಸಬೇಕು, ತಾವುಗಳು ಗ್ರಾಮಗಳಿಗೆ ಭೇಟಿ ನೀಡುತ್ತಿಲ್ಲವೆಂಬ ದೂರು ಕೇಳಿ ಬಂದಿದೆ, ಮೊದಲು ಹಳ್ಳಿಗಳಿಗೆ ಹೋಗಿ ರೈತರ ಸಮಸ್ಯೆ ನಿವಾರಿಸಿ, ಇಲ್ಲದಿದ್ದರೆ ಜನರೊಟ್ಟಿಗೆ ಇಲಾಖೆಯ ಮುಂದೆ ನಾನೇ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಹಕಾರ ಸಂಘಗಳಿಗೆ ಕೋಳಿ, ಹಂದಿಗಳನ್ನು ನೀಡ ಬೇಡಿ, ಈಗಾಗಲೇ ರಾಜಕೀಯ ಪ್ರಭಾವಗಳನ್ನು ಬಳಸಿ ಗಿರಿರಾಜ ಕೋಳಿ ಮರಿಗಳು. ಹಂದಿಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಿ ನಿಜವಾದ ಫಲಾನುಭವಿಗಳಿಗೆ ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಎನ್. ಶಿವರಾಂ, ಅಧಿಕಾರಿ ಜಯರಾಂ, ಸಹಾಯಕ ನಿರ್ದೇಶಕರಾದ ಡಾ. ಚನ್ನಕೇಶವ, ಡಾ.ಅಶ್ವತ್, ಡಾ. ಅಪ್ಜಲ್ ಪಾಷ ಇದ್ದರು.