ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದನದ ಕೊಟ್ಟಿಗೆಗಿಂತ ಕೀಳು ಈ ಕಾಲೇಜು!

Rashmi Kasaragodu
Updated On : 22 Feb 2014, 2:06 am

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ರಾಜ್ಯ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಶುಕ್ರವಾರ ಭೇಟಿ ನೀಡಿ ಅವ್ಯವಸ್ಥೆ,ಅಸಮರ್ಪಕ ನಿರ್ವಹಣೆ ನೋಡಿ ಕಾಲೇಜು ದನದ ಕೊಟ್ಟಿಗೆಗಿಂತ ಕೀಳು ಎಂಬ ಪ್ರಮಾಣ ಪತ್ರ ನೀಡಿದರು.
ಬಹುತೇಕ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಓದುತ್ತಿರುವ ಸರ್ಕಾರಿ ಕಾಲೇಜಿನ ಅನುದಾನದ ಖರ್ಚಿನಲ್ಲಿ ಗೋಲ್ ಮಾಲ್ ನಡೆದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅವರು ಅನಿರೀಕ್ಷಿತವಾಗಿ ಕಾಲೇಜಿಗೆ ಆಗಮಿಸಿ ಪರಿಶೀಲಿಸಿದರು.
ಕಾಲೇಜಿಗೆ ಪ್ರವೇಶಿಸುತ್ತಿದ್ದಂತೆ ಮೊದಲು ಶುಲ್ಕ ವಸೂಲಿ, ಅನುದಾನ ಮಂಜೂರು, ಖರ್ಚಿನ ವಿವರ, ಅಭಿವೃದ್ಧಿ ಕಾಮಗಾರಿಗಳ ಕುರಿತ ಕಡತಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಲೋಪದೋಷಗಳನ್ನು ಕಂಡು ಹಿಡಿಯುವ ಸಲುವಾಗಿ ಆಡಿಟ್ ಮಾಡಿಸಿರುವ ಪತ್ರವನ್ನೂ ತೆಗೆದಿರಿಸಿಕೊಳ್ಳಲಾಯಿತು.
ಇಲ್ಲಿ ಏನೂ ಇಲ್ಲ: ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಕಾಲೇಜಿನ ಕಚೇರಿಯ ಕೊಠಡಿಯಲ್ಲಿ ಪರಿಶೀಲನೆ ನಡೆಸಿದ ನಂತರ ಉಪ ಲೋಕಾಯುಕ್ತರು ಉಪನ್ಯಾಸಕರ ಕೊಠಡಿ, ಪ್ರಯೋಗಾಲಯ, ಕಂಪ್ಯೂಟರ್ ತರಬೇತಿ ಕೊಠಡಿ ಸೇರಿದಂತೆ ಕಾಲೇಜಿನ ವಿವಿಧ ತರಗತಿಗಳಿಗೆ ತೆರಳಿ ಪರಿಶೀಲಿಸಿದರು. ಯಾವುದೇ ತರಗತಿಗೆ ಹೋದರೂ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ಮಾತ್ರ ಇರಲಿಲ್ಲ. ಮೊದಲಿಗೆ ಉಪನ್ಯಾಸಕರ ಹಾಜರಾತಿಯೇ ಸರಿಯಾಗಿ ಇರಲಿಲ್ಲ. ವಿದ್ಯಾರ್ಥಿಗಳ ಹಾಜರಾತಿ ಪುಸ್ತಕ ನಿರ್ವಹಣೆ ಮಾಡದೇ ಇದ್ದಾಗ ಕಾಲೇಜಿಗೆ ವಿದ್ಯಾರ್ಥಿಗಳು ಸರಿಯಾಗಿ ಪ್ರತಿದಿನ ಬರುತ್ತಿದ್ದಾರೆ ಎನ್ನುವುದು ಹೇಗೆ ತಿಳಿಯುತ್ತದೆ. ಪುಂಡಪೋಕರಿಗಳು ಸೇರಿದಂತೆ ಸಂಬಂಧವಿಲ್ಲದವರು ಯಾರೇ ಕೊಠಡಿಯಲ್ಲಿ ಬಂದು ಕುಳಿತು ಪಾಠ ಕೇಳುವುದು ಇಲ್ಲವೇ ಗಲಾಟೆ ಮಾಡಿದರೂ ತಿಳಿಯುವುದಿಲ್ಲ ಎಂದು ಉಪ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದಾಗ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ನಿರುತ್ತರಾದರು. 45 ನಿಮಿಷಗಳ ಕಡಿಮೆ ಅವಧಿಯಲ್ಲಿ ಪಾಠ ಮಾಡುವುದರ ಜೊತೆಗೆ ವಿದ್ಯಾರ್ಥಿಗಳ ಹೆಸರನ್ನು ಕೂಗಿ ಹಾಜರಿ ಹಾಕುವುದಕ್ಕೆ ಸಮಯ ಸಾಲುವುದಿಲ್ಲ ಎಂಬ ಉತ್ತರವನ್ನು ಒಪ್ಪಲಿಲ್ಲ. ಇರುವ ನಿಯಮವನ್ನು ತಪ್ಪದೇ ಪಾಲನೆ ಮಾಡುವುದು ನಿಮಮ ಜವಾಬ್ದಾರಿ, ಇನ್ನು ಮುಂದೆ ನಿರ್ಲಕ್ಷ್ಯ ಮುಂದುವರೆಸಬಾರದೆಂಬ ಎಚ್ಚರಿಕೆ ನೀಡಿದ ಅವರು, ವೇಳಾಪಟ್ಟಿ ಅನುಸಾರವಾಗಿ ತರಗತಿಗಳು ನಡೆಯುವುದಿಲ್ಲ, ನಿರ್ದಿಷ್ಟ ಕೋರ್ಸುಗಳಿಗೆ ಪಾಠ ಮಾಡಲು ನಿರ್ದಿಷ್ಟ ಕೊಠಡಿಗಳನ್ನು ನಿಗದಿಪಡಿಸಿಲ್ಲ ಎಂಬ ಮಾಹಿತಿ ತಿಳಿದು ಸಿಡಿಮಿಡಿಗೊಂಡರು.
ಕಾಲೇಜಿನಲ್ಲಿ ಪರೀಕ್ಷಾ ಶುಲ್ಕ ಕಟ್ಟಲು ತೊಂದರೆಯಾಗುತ್ತಿದೆ. ವರಾಂಡದಲ್ಲಿ ಕಿರಿಕಿರಿಯಲ್ಲಿಯೇ ಕುಳಿತು ಪಾಠ ಕೇಳಬೇಕು. ಕಾಲೇಜಿನ ಶೌಚಾಲಯ ಗಬ್ಬುವಾಸನೆಯಿಂದ ಕೂಡಿದೆ. ನೀರಿನ ಸಮಸ್ಯೆ ಇದೆ ಎಂದು ವಿದ್ಯಾರ್ಥಿಗಳು ಪುಂಖಾನುಪುಂಖಾವಾಗಿ ಆರೋಪಗಳ ಸುರಿಮಳೆಗೈದರು. ಎನ್ಸಿಸಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಅಗತ್ಯ ವಸ್ತುಗಳನ್ನು ಸರಿಯಾಗಿ ನೀಡುತ್ತಿಲ್ಲ. ಪ್ರಮುಖವಾಗಿ ತರಬೇತಿ ಶಿಬಿರಗಳ ಬಗ್ಗೆ ಸರಿಯಾಗಿ ಮಾಹಿತಿಯೇ ತಿಳಿಯುವುದಿಲ್ಲ ಎಂದು ಎನ್ಸಿಸಿ ವಿದ್ಯಾರ್ಥಿಗಳು ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement