ಸರ್ಕಾರದ ತೀರ್ಮಾನ ಖಂಡಿಸಿ ಪ್ರತಿಭಟನೆ
ಬಾಗೇಪಲ್ಲಿ: ಐಟಿಐ(ವೃತ್ತಿಪರ) ವ್ಯಾಸಂಗ ಮಾಡಿರುವವರಿಗೆ ಬೆಸ್ಕಾಂ ಇಲಾಖೆಯ ಹುದ್ದೆಗಳಿಗೆ ನೇಮಕಾತಿ ರದ್ದುಪಡಿಸಿರುವ ಸರ್ಕಾರದ ತೀರ್ಮಾನ ಖಂಡಿಸಿ ಡಿವೈಎಫ್ಐ ಹಾಗೂ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹೊರಟು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಮುಂಭಾಗದಲ್ಲಿ ರಾಜ್ಯ ಸರ್ಕಾರದ ಪ್ರತಿಕೃತಿ ದಹನ ನಡೆಸಿದ ನಂತರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಡಿವೈಎಫ್ಐ ತಾಲೂಕು ಸಮಿತಿ ಅಧ್ಯಕ್ಷ ಹೇಮಚಂದ್ರ ಮಾತನಾಡಿ, ದಿನಕ್ಕೊಂದು ಕಾನೂನು ಮಾಡುವ ಮೂಲಕ ಮಹಮ್ಮದ್ ಬಿನ್ ತೊಗಲಕರನ್ನು ಮೀರಿಸುವ ರೀತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ಐಟಿಐ(ವೃತ್ತಿಪರ) ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳ ಮೂಲ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದು ಕಳೆದ ಸುಮಾರು ವರ್ಷಗಳಿಂದ ಐಟಿಐ ವ್ಯಾಸಂಗ ಮಾಡಿರುವವರನ್ನು ಬೆಸ್ಕಾಂ ಇಲಾಖೆಯಲ್ಲಿ ವಿವಿಧ ರೀತಿಯ ಹುದ್ದೆಗಳನ್ನು ನೇಮಕಾತಿಗೆ ಅವಕಾಶವನ್ನು ನೀಡಲಾಗುತ್ತಿತ್ತು. ಬೆಸ್ಕಾಂ ಇಲಾಖೆಯಲ್ಲಿ ಉದ್ಯೋಗ ಸಿಗುತ್ತೆ ಎಂಬ ನಂಬಿಕೆಯಿಂದ ಸಾವಿರಾರು ವಿದ್ಯಾರ್ಥಿಗಳು ಐಟಿಐ ವ್ಯಾಸಂಗ ಮಾಡಿದ್ದು ಈ ನಡುವೆ ಏಕಾಏಕಿ ಬೆಸ್ಕಾಂ ಇಲಾಖೆಯಲ್ಲಿನ ಯಾವುದೇ ಹುದ್ದೆಗೆ ಅರ್ಹರಲ್ಲ ಎಂಬ ಅರ್ಥದಲ್ಲಿ ತೀರ್ಮಾನ ತೆಗೆದುಕೊಂಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಾಜಶೇಖರ್ ಮಾತನಾಡಿ, ಬೆಸ್ಕಾಂ ಇಲಾಖೆಯಲ್ಲಿ ಐಟಿಐ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೆ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರಿಂದ ಉಪ ತಹಸೀಲ್ದಾರ್ ರಾಜೇಂದ್ರ ಮನವಿ ಸ್ವೀಕರಿಸಿದರು. ಡಿವೈಎಫ್ಐ ಉಪಾಧ್ಯಕ್ಷ ಶ್ರೀನಿವಾಸ್, ಸಹ ಕಾರ್ಯದರ್ಶಿ ಜಗದೀಶ್, ಎಸ್ಎಫ್ಐ ತಾಲೂಕು ಕಾರ್ಯದರ್ಶಿ ನರಸಿಂಹಮೂರ್ತಿ, ರಾಘವೇಂದ್ರರೆಡ್ಡಿ, ಶ್ರೀನಾಥ್, ಶ್ರೀಕಾಂತ್ ಇದ್ದರು.