20 ನಿಮಿಷ 20 ಸುದ್ದಿ
ಮಾಲೂರಿನಲ್ಲಿ ನಮೋ ಟೀ ಸ್ಟಾಲ್ ಆರಂಭ
ಮಾಲೂರು: ಗುಜರಾತ್ ರಾಜ್ಯದ ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿಯಾಗಿ ಕಾಣಬೇಕೆಂಬ ಇಂದಿನ ಯುವ ಸಮುದಾಯದ ಆಶಯ ನೆರವೇರಲಿದೆ ಎಂದು ಬಿಜೆಪಿ ಮುಖಂಡ ಜಿ.ಇ. ರಾಮೇಗೌಡ ಹೇಳಿದರು. ಪಟ್ಟಣದ ಬಸ್ ನಿಲ್ದಾಣ ಬಳಿ ಬಿಜೆಪಿ ಯುವ ಮೋರ್ಚಾ ಪ್ರಾರಂಭಿಸಿರುವ ಒಂದು ರು.ಗೆ ಒಂದು ಚಾಯ್ ಟೀ ಸ್ಟಾಲ್ಗೆ ಚಾಲನೆ ನೀಡಿ ಮಾತನಾಡಿ, ದೇಶದಾದ್ಯಂತ ನಮೋ ಹವಾ ಬೀಸುತ್ತಿದ್ದು, ಹತ್ತು ವರ್ಷ ದೇಶದಲ್ಲಿ ಕೆಟ್ಟ ಆಡಳಿತ ನೀಡಿದ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದರು. ಯುವ ಮೋರ್ಚಾ ಅಧ್ಯಕ್ಷ ಅಪ್ಪಿರಾಜು ಮಾತನಾಡಿ, ತುಚ್ಚ ಹೇಳಿಕೆ ನೀಡಿ ಸ್ವಾಭಿಮಾನಿ ಕೂಲಿ ಕಾರ್ಮಿಕರನ್ನು ಕೆಣಕಿದ ಕಾಂಗ್ರೆಸ್ನ ಮಣಿ ಶಂಕರ್ ಅಯ್ಯರ್ಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದರು. ಭಾವನಹಳ್ಳಿ ಮುನಿಯಪ್ಪ, ಸಾಬೂಸಾಬ್ ಇದ್ದರು.
ಮಾರಿಕಾಂಬ ದೇವಾಲಯದ ಹುಂಡಿಯಲ್ಲಿ ರು. 12 ಲಕ್ಷ
ಮಾಲೂರು: ಇಲ್ಲಿನ ಗ್ರಾಮ ದೇವತೆ ಮಾರಿಕಾಂಬ ಬಸ್ತುನಲ್ಲಿ ತೆರದು ಎಣಿಸಲಾಗಿದ್ದು, 12 ಲಕ್ಷ ರು.ನಗದು ಹಾಗೂ 46 ಗ್ರಾಂ ಚಿನ್ನ ಸಂಗ್ರಹವಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಪಿ. ವೆಂಕಟೇಶ್ ನೇತೃತ್ವದಲ್ಲಿ ಸ್ವಯಂ ಸೇವಕರು ಹುಂಡಿ ತೆರೆದು ಹಣ ಎಣಿಸಲಾಯಿತು.
ಕಳೆದ ಮೂರು ತಿಂಗಳಲ್ಲಿ ಸಂಗ್ರವಾಗಿದ್ದ ಹಣವನ್ನು ಸ್ಥಳೀಯ ಕೆನರಾ ಬ್ಯಾಂಕ್ ನಲ್ಲಿ ಠೇವಣಿ ಮಾಡಲಾಯಿತು. ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಉಷಾ ರಾಜರಾಮ್, ವೀಣಾ, ಮಂಜುನಾಥ್, ನಾಗಭೂಷಣ್, ದೇವಾಲಯ ಸಮಿತಿಯ ಶ್ರೀನಾಥ್, ನರೇಂದ್ರ ಬಾಬು, ಶಂಕರ್, ಕೆ.ಇ.ಬಿ.ನಾರಾಯಣಪ್ಪ, ವೆಂಕಟೇಶ್, ಸುಬ್ಬರಾವ್, ಪಂಚೆ ನಂಜುಂಡಪ್ಪ, ಆರ್. ಕೃಷ್ಣಪ್ಪ ಇದ್ದರು.
ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆ
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ನಲ್ಲಿ ನಿರೀಕ್ಷಿಸಿದಷ್ಟು ಹಣವನ್ನು ಮೀಸಲಿಡಲಿಲ್ಲ ಎಂದು ದಸಂಸ (ಅಂಬೇಡ್ಕರ್ ವಾದ)ದ ರಾಜ್ಯ ಸಂಚಾಲಕ ಟಿ. ವಿಜಯಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ನಚಿಕೇತ ನಿಲಯದಲ್ಲಿ ಕರ್ನಾಟಕ ದಲಿತ ಸಿಂಹಸೇನೆ ವತಿಯಿಂದ ಮಹಾತ್ಮ ಜ್ಯೋತಿಬಾಪುಲೆ ಅವರ 187ನೇ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸಬಲರಾಗಬೇಕಾದರೆ ಶಿಕ್ಷಣವೇ ಅಸ್ತ್ರ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ದಲಿತ ಸಿಂಹ ಸೇನೆಯ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್, ದಲಿತರು ಸಂಘಟಿತರಾಗಿ ಅನ್ಯಾಯ ವಿರುದ್ಧ ಹೋರಾಟ ನಡೆಸದಿದ್ದರೆ ದಲಿತರಿಗೆ ಸಮಾಜದಲ್ಲಿ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್, ಉಪನ್ಯಾಸಕ ಪಲ್ಲವಿ ಮಣಿ, ಡಾ. ಶಿವಪ್ಪ, ಚಿಗರು ಸಂಸ್ಥೆ ನಿರ್ದೇಶಕಿ ಎಸ್.ಪ್ರಭಾವತಿ, ತಿಗಳ ಸಮಾಜದ ಮುಖಂಡ ಪಾಲ್ಗುಣ, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಸುಧಾಕರ್, ಸಬ್ ಇನ್ಸ್ಪೆಕ್ಟರ್ ದೇವೇಂದ್ರಪ್ಪ ಇದ್ದರು.
ಬಂದೂಕು ತರಬೇತಿ ಅಗತ್ಯ
ಕೋಲಾರ: ಬಂದೂಕು ತರಬೇತಿ ಪಡೆದಲ್ಲಿ ಆತ್ಮರಕ್ಷಣೆಗೆ ಅನುಕೂಲವಾಗುತ್ತದೆ. ಆದರೆ, ಯಾರೂ ಸಹ ದುರುಪಯೋಗಪಡಿಸಿಕೊಳ್ಳಬಾರದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮನಿವಾಸ್ ಸಫೆಟ್ ಅವರು ತಿಳಿಸಿದರು.
ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿನ ಅತ್ಯಾಚಾರ, ಅಪರಾಧಗಳನ್ನು ತಡೆಯಲು ಪೊಲೀಸ್ ಇಲಾಖೆ ಮತ್ತು ನಾಗರಿಕರು ಕೈ ಜೋಡಿಸುವಂತಾಗಬೇಕು, ಬಂದೂಕು ತರಬೇತಿ ಹೊಂದಿದಲ್ಲಿ ತಮ್ಮ ಜೀವಕ್ಕೆ ಅಪಾಯ ಎದುರಾದಾಗ ಪರಿಸ್ಥಿತಿ ನಿಬಾಯಿಸಲು ಸಹಾಯವಾಗುತ್ತದೆ ಎಂದರು. ಡಿವೈಎಸ್ಪಿ ಅಶೋಕ್ ಕುಮಾರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್.ಪಿ.ಐ. ಬಸವರಾಜ್, ಕನಕ ಗ್ರಾಮೀಣ ಕ್ರೀಡಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಇದ್ದರು.
ಅಭಿವೃದ್ಧಿಯಲ್ಲಿ ಜಿಲ್ಲೆ ಪ್ರಥಮವಾಗಲಿ
ಕೋಲಾರ: ದಕ್ಷತೆ ಮತ್ತು ಸಹಕಾರದಿಂದ ಕಾರ್ಯನಿರ್ವಹಿಸುವ ಮೂಲಕ ಅಭಿವೃದ್ಧಿಯಲ್ಲಿ ಜಿಲ್ಲೆಯನ್ನು ಮೊದಲ ಸ್ಥಾನಕ್ಕೆ ತರೋಣ ಎಂದು ಸರ್ಕಾರಿ ನೌಕರರಿಗೆ ಜಿಪಂ ಕಾರ್ಯನಿರ್ವಹಣಾಧಿಕಾರಿ ವಿನೋತ್ ಪ್ರಿಯಾ ಕರೆ ನೀಡಿದರು. ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ನೌಕರರ ಭವನದಲ್ಲಿ ನಡೆದ ಅವರ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ನೌಕರರು ತಮ್ಮ ಸಮಸ್ಯೆಯನ್ನು ಮೊದಲು ತಮ್ಮ ಬಳಿಗೆ ತನ್ನಿ ಪರಿಹಾರ ನೀಡುತ್ತೇನೆ ಆದರೆ ಅದಕ್ಕೂ ಮುನ್ನಾ ಜನಪ್ರತಿನಿಧಿಗಳಿಂದ ಒತ್ತಡ ಹಾಕುವ ಮನೋಭಾವ ಬೆಳೆಸಿಕೊಳ್ಳದಿರಿ ಎಂದು ಕಿವಿಮಾತು ಹೇಳಿದರು. ನೂತನ ಸಿಇಒರನ್ನು ಸ್ವಾಗತಿಸಿದ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್, ಜಿಲ್ಲೆಯ ಅಭಿವೃದ್ಧಿಯ ಹಾದಿಯಲ್ಲಿ ಸಿಇಒರೊಂದಿಗೆ ನೌಕರರು ಪ್ರಾಮಾಣಿಕವಾಗಿ ಸಹಕರಿಸುತ್ತಾರೆ, ಅವರ ಹಿತ ರಕ್ಷಣೆಗೂ ತಾವು ಆತ್ಮಸ್ಥೈರ್ಯ ತುಂಬಬೇಕು ಎಂದು ಮನವಿ ಮಾಡಿದರು. ರವಿಚಂದ್ರ, ಕೆ.ಬಿ. ಅಶೋಕ್, ರಂಗಯ್ಯ, ಮುನಿರಾಜು ಇದ್ದರು.
ಇಂದು ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಭೇಟಿ
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಕೋಲಾರ ಜಿಲ್ಲೆಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ನಲ್ಲಿ ಕೋಲಾರಕ್ಕೆ ಆಗಮಿಸಿ ರಸ್ತೆ ಮಾರ್ಗವಾಗಿ ತೊರದೇವಂಡಹಳ್ಳಿಯಲ್ಲಿರುವ ಸಿಬಿಐಟಿಯಲ್ಲಿ ಬೆಳಿಗ್ಗೆ 10 ಗಂಟೆಗೆ ವೃತ್ತಿಪರ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ನಂತರ ಸಿದ್ದರಾಮಯ್ಯನವರು ಶ್ರೀನಿವಾಸಪುರ ತಾಲೂಕಿನ ದಳಸನೂರಿನಲ್ಲಿ ಬೆಳಿಗ್ಗೆ 10.30ಕ್ಕೆ ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸುವರಲ್ಲದೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಅಧಿಕಾರಿಗಳ ವಿರುದ್ಧ ದಲಿತ ಮುಖಂಡರ ಆರೋಪ
ಕೋಲಾರ: ರಾಜ್ಯ ಮಟ್ಟದ ಜನಪರ ಉತ್ಸವಕ್ಕೆ ನಿಯೋಜನೆಗೊಂಡಿದ್ದ ದಲಿತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರಿಗಳು ಉದ್ದಟನದಿಂದ ವರ್ತಿಸುತ್ತಿರುವುದನ್ನು ಭಾನುವಾರ ಜಿಲ್ಲೆಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುವುದಲ್ಲದೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ನಿರ್ಮಿತಿ ಕೇಂದ್ರದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸುವುದಾಗಿ ದಲಿತ ಮುಖಂಡರಾದ ಹಾರೋಹಳ್ಳಿ ವಿ.ನಾರಾಯಣಸ್ವಾಮಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು,ಇದೇ ಫೆ.23ರಂದು ಕೋಲಾರದಲ್ಲಿ ನಡೆಸಲು ಉದ್ದೇಶಿಸಿರುವ ರಾಜ್ಯ ಮಟ್ಟದ ಜನಪರ ಉತ್ಸವ-2014 ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಡಿ.ಕೆ. ರವಿರವರು ಎಲ್ಲ ದಲಿತ ಮುಖಂಡರನ್ನು ಗಣನೆಗೆ ತೆಗೆದುಕೊಂಡು ವಿವಿಧ ಸಮಿತಿಗಳ ರಚಿಸಿ ಅವುಗಳ ಜವಾಬ್ದಾರಿಯನ್ನು ದಲಿತ ಮುಖಂಡರಿಗೆ ವಹಿಸಿಕೊಟ್ಟಿದ್ದರು. ಆದರೆ, ಇವರ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳು ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿರುವುದಲ್ಲದೆ, ಸರ್ಕಾರದಿಂದ ಉತ್ಸವಕ್ಕಾಗಿ ಬಿಡುಗಡೆಯಾಗಿರುವ ಹಣವನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆಂದು ದೂರಿದ್ದಾರೆ.
ವಿವಿಧ ಬೇಡಿಕೆಗಳಿಗೆ ನಾಳೆ ಕೆಡಿಎಸ್ಎಸ್ ಪ್ರತಿಭಟನೆ
ಕೋಲಾರ: ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ದಲಿತ ಮಹಿಳೆಯರ ಸಬಲೀಕರಣ, ರಾಜ್ಯದ 15 ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿರುವವರನ್ನು ತೆರವುಗೊಳಿಸುವುದು ಸೇರಿದಂತೆ ಸಂಘಟನೆಯ 12 ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಫೆ.24 ರಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ವೆಂಕಟಗಿರಿಯಪ್ಪ ತಿಳಿಸಿದ್ದಾರೆ. ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಕೋಲಾರದ ಪ್ರವಾಸಿ ಮಂದಿರದಿಂದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವರು. ಮೆರವಣಿಗೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಿರುವುದಾಗಿ ಹೇಳಿದರು. ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ವಿ.ನಾರಾಯಣಸ್ವಾಮಿ, ಮುಖಂಡ ಡಿ. ಚಿಕ್ಕಣ್ಣ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಡಿಡಿಪಿಐ ಭರವಸೆ
ಕೋಲಾರ: ಪ್ರಾಥಮಿಕ ಶಾಲಾ ಶಿಕ್ಷಕರು ಸಕಾಲದಲ್ಲಿ ವೇತನ ಪಾವತಿ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಕಚೇರಿ ಮುಂದೆ ಶನಿವಾರ ಧರಣಿ ನಡೆಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್, ಶಿಕ್ಷಕರಿಗೆ ಸಕಾಲಕ್ಕೆ ವೇತನ ನೀಡದೇ ಅವರನ್ನು ಬೀದಿಗೆ ಬರುವಂತೆ ಇಲಾಖೆ ಮಾಡಿದೆ ಎಂದು ದೂರಿದರಲ್ಲದೆ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಮನವಿ ಸ್ವೀಕರಿಸಿದ ಡಿಡಿಪಿಐ ಎಸ್.ವಿ. ಪದ್ಮನಾಭ್ ಮಾತನಾಡಿ, ಶಿಕ್ಷಕರ ವೇತನ ಹಂಚಿಕೆ ನೇರವಾಗಿ ತಾಪಂಗಳಿಗೆ ಹೋಗುತ್ತದೆ ಮತ್ತು ಅಲ್ಲಿಂದ ಬಿಇಒ ಕಚೇರಿಗೆ ತಲುಪುತ್ತಿದ್ದು, ಅನುದಾನವಿಲ್ಲದ್ದು ತಮ್ಮ ಗಮನಕ್ಕೆ ಬರುವುದು ತಡವಾಯಿತು ಎಂದರು.ಸೊಣ್ಣೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ನಾಗರಾಜ್ ಹಾಗೂ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಇದ್ದರು.
ಮಹಾ ಶಿವರಾತ್ರಿ ಪ್ರಯುಕ್ತ ಕೋಟಿ ಶಿವನಾಮ ಜಪ
ಚಿಂತಾಮಣಿ: ತಾಲೂಕಿನ ಕಾಗತಿ ಗ್ರಾಪಂ ಬಡಗವಾರಹಳ್ಳಿಯ ಶ್ರೀ ಮುನೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಕೋಟಿ ಶಿವನಾಮ ಜಪ ಮಹಾಯಜ್ಞವನ್ನು ಏರ್ಪಡಿಸಲಾಗಿದೆ ಎಂದು ದೇವಾಲಯ ಧರ್ಮದರ್ಶಿ ಕಾಗತಿ ವಿ. ವೆಂಕಟರತ್ನಂ ತಿಳಿಸಿದ್ದಾರೆ. ಫೆ.27 ರ ಭೆಳಗ್ಗೆ 5 ಗಂಟೆಗೆ ಹಿರಿಯ ವೇದಾಂತಿ ಗೋವಿಂದಪ್ಪಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮರುದಿನ ಬೆಳಗ್ಗೆ 5 ಗಂಟೆಯವರೆಗೆ ನಿರಂತರವಾಗಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಡಂಪಲ್ಲಿ, ಬಡಗವಾರಹಳ್ಳಿ ಮತ್ತಿತರೆ ಭಜನಾ ತಂಡಗಳು ಪಾಲ್ಗೊಂಡು ಶಿವನಾಮ ಜಪಿಸಿ ಮಹಾಶಿವರಾತ್ರಿಗೆ ಭಕ್ತಿಯ ಮೆರೆಗು ನೀಡಲಿವೆ. ಅಹೋರಾತ್ರಿ ಶ್ರದ್ಧಾ ಭಕ್ತಿಗಳಿಂದ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಎಲ್ಲಾ ರೀತಿಯ ಏರ್ಪಾಡುಗಳನ್ನು ಮಾಡಲಾಗುವುದೆಂದು ವಿವರಿಸಿರುವ ಕಾಗತಿ ವಿ. ವೆಂಕಟರತ್ನಂ ಭಕ್ತರು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.
ಹಾಲಿನಪುಡಿ ಘಟಕ ಸ್ಥಾಪನೆಗೆ ನೆರವು
ಮುಳಬಾಗಲು: ನೂರು ಕೋಟಿ ರು.ಗಳ ವೆಚ್ಚದ ಹಾಲುಪುಡಿ ಘಟಕ ಪ್ರಾರಂಭಿಸಲು ರಾಷ್ಚ್ರೀಯ ಹೆದ್ದಾರಿ ಸಮೀಪದಲ್ಲಿ ಹತ್ತು ಎಕರೆ ಸರ್ಕಾರಿ ಜಮೀನು ಕೋಚಿಮುಲ್ಗೆ ಸರ್ಕಾರದಿಂದ ಮಂಜೂರು ಮಾಡಿಸಿ ಎಲ್ಲಾ ನೆರವು ನೀಡುವುದಾಗಿ ಶಾಸಕ ಕೊತ್ತೂರು ಮಂಜುನಾಥ್ ಹೇಳಿದರು. ಮುಳಬಾಗಲು ಪಶುಪಾಲನೆ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಲುಬಾಯಿ ಜ್ವರದಿಂದ ಮೃತ ಪಟ್ಟ ರಾಸುಗಳ ಮಾಲೀಕರಿಗೆ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿ, ರಾಸುಗಳಿಗೆ ಸಕಾಲಕ್ಕೆ ಲಸಿಕೆ ಹಾಕಿಸುವುದರಿಂದ ಕಾಲುಬಾಯಿ ರೋಗ ಬಾರದಂತೆ ಎಚ್ಚರಿಕೆ ವಹಿಸಬಹುದು ಎಂದರು. ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಮಾತನಾಡಿದರು. ಜಿ. ರಾಮಲಿಂಗಾರೆಡ್ಡಿ, ಎಂ.ಸಿ. ನೀಲಕಂಠೇಗೌಡ, ಸುಬ್ಬಮ್ಮ ಅಪ್ಪಿ, ಕದರಿಪುರ ರಾಜಪ್ಪ, ತಾಪಂ ಸದಸ್ಯ ಬೈರಪ್ಪ, ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮಾನಂದ ಇದ್ದರು.
ವಿದ್ಯಾರ್ಥಿಗಳು ಶಿಸ್ತುಪಾಲನೆ ಮಾಡಿ
ಕೆಜಿಎಫ್: ಶಾಲಾ ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಶಿಸ್ತು ಪಾಲನೆ ಮತ್ತು ದೇಶದ ರಕ್ಷಣೆಗೆ ಎನ್ಸಿಸಿ, ಎನ್ಎಸ್ಎಸ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಸಮಾಜ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಕೃಷ್ಣಮೂರ್ತಿ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸಂಸ್ಥಾಪಕ ಬಾಡನ್ಪೂವಲ್ ಅವರ ಜನ್ಮದಿನಾಚರಣೆ ಪ್ರಯುಕ್ತ ಕೆಜಿಎಫ್ನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ವಿವಿಧ ಶಾಲಾ ಮಕ್ಕಳಿಂದ ಜಾಥಾ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಪ್ರಾರಂಭಗೊಂಡ ಜಾಥಾದಲ್ಲಿ ನಗರದ ವಿವಿಧ ಶಾಲೆಗಳ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಖಾಸಗಿ ಶಾಲೆಗಳ ಶಿಕ್ಷಕರ ಸಂಘದ ಕಾರ್ಯದರ್ಶಿ ಗೋಪಿನಾಥ್ ಇದ್ದರು.
ಹಾಸ್ಟೆಲ್ಗಳಲ್ಲಿ ವ್ಯಾಪಕ ಅವ್ಯವಹಾರ: ಶಾಸಕರ ವಿಷಾದ
ಬಂಗಾರಪೇಟೆ: ಪಟ್ಟಣದ ಸಮಾಜ ಕಲ್ಯಾಣ ಹಾಸ್ಟೆಲ್ಗಳಲ್ಲಿ ನಡೆಯುವಷ್ಟು ಅವ್ಯವಹಾರ ಬೇರೆಯಲ್ಲಿಯೂ ನಡೆಯುವುದಿಲ್ಲ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ವಿಷಾಧ ವ್ಯಕ್ತಪಡಿಸಿದರು.
ಪಟ್ಟಣದ ಬಾಲಕೀಯರ ಮೆಟ್ರಿಕ್ ನಂತರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕೆಲವು ವಾರ್ಡನ್ಗಳು ವರ್ಷಾನುಗಟ್ಟಲೆ ಒಂದೇ ಜಾಗದಲ್ಲಿ ಇರುವುದರಿಂದ ಇಂತಹ ವಾರ್ಡನ್ಗಳು ಮೇಲಾಧಿಕಾರಿಗಳನ್ನು ಬೆದರಿಸುವ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ,ನಿಷ್ಟಾವಂತ ಅಧಿಕಾರಿಗಳು ಪಟ್ಟಣಕ್ಕೆ ಬರಲು ಹೆದರುವಂತಾಗಿದೆ, ಇದರಿಂದ ಹಾಸ್ಟೆಲ್ಗಳಲ್ಲಿ ಮಕ್ಕಳಿಗೆ ಸಮರ್ಪಕ ಸೌಲಭ್ಯಗಳು ದೊರೆಯದೆ ವಂಚಿತಗಾರಿದ್ದಾರೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಶಂಷುದ್ದಿನ್ ಬಾಬು ಇದ್ದರು.
ಶಿಕ್ಷಣದಿಂದ ದೇಶದ ಅಭಿವೃದ್ಧಿ ಸಾಧ್ಯ
ಚಿಂತಾಮಣಿ: ಪ್ರತಿಯೊಬ್ಬ ಮಗು ಕಡ್ಡಾಯವಾಗಿ ಶಿಕ್ಷಣ ಪಡೆದರೆ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ನೆರ್ನಕಲ್ಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರು. ಕೈವಾರ ಯೋಗಿನಾರೇಯಣ ಮಠದ ವ್ಯವಸ್ಥಾಪಕ ಹಾಗೂ ಪ್ರವಚನಕಾರ ಟಿ.ಎಲ್. ಆನಂದ್, ವಿದ್ಯಾರ್ಥಿಗಳು ವಿದೇಶಿ ಸಂಸ್ಕೃತಿ ವ್ಯಾಮೋಹಕ್ಕೆ ಒಳಗಾಗದೆ ಸ್ವದೇಶಿ ದೇಶಾಭಿಮಾನ ಬೆಳೆಸಿ ಕನ್ನಡ ಉಳಿಸಿ ಎಂದು ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಜಾನಪದ ಗೀತೆಗಳ ಗಾಯನವನ್ನು ಶಿಕ್ಷಕ ಎಂ.ಎನ್. ರಮೇಶ್ ಕುಮಾರ್ ನಡೆಸಿಕೊಟ್ಟರು. ವೇದಿಕೆಯಲ್ಲಿ ಶಾಲಾ ಮಕ್ಕಳು ವಿವಿಧ ವೇಷ ಭೂಷಣಗಳಲ್ಲಿ ಕಾಣಿಸಿಕೊಂಡಾಗ ನೆರೆದಿದ್ದ ಪೋಷಕರ ಹಾಗೂ ಗ್ರಾಮಸ್ಥರ ಮನಸೆಳೆಯಿತು. ಈ ಸಂದರ್ಭದಲ್ಲಿ ಇಸಿಒ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ಶ್ರೀನಿವಾಸ್, ಶಿಕ್ಷಕರಾದ ಗೋಪಾಲಕೃಷ್ಣ, ವೀಣಾ, ಅಶೋಕ್ ಕುಮಾರ್, ಸುಜಾತಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ರಮೇಶ್, ನಂದೀಶ್ ಇದ್ದರು.
ಹಾಸ್ಟೆಲ್ಗಳ ಅವ್ಯವಸ್ಥೆ ಸರಿಪಡಿಸಲು ಸೂಚನೆ
ಶಿಡ್ಲಘಟ್ಟ: ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್ಗಳು ಅವ್ಯವಸ್ಥೆಯಿಂದ ಕೂಡಿದ್ದು, ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲವೆಂದು ತಾಪಂ ಅಧ್ಯಕ್ಷ ಯರಬಚ್ಚಪ್ಪ ಆರೋಪಿಸಿದರು. ತಾಪಂ ಸಭಾಂಗಣದಲ್ಲಿ ಸಾಮಾನ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳಿಂದ ಅನುಷ್ಠಾನದೊಂಡ ಪ್ರಗತಿ ವರಿದಿ ಮಂಡನೆ ಮಾಡಿದ್ದು, ಚರ್ಚೆಯಾಗದ ವಿಷಯ ಮಂಡನೆ ಮಾಡುವುದು ಸರಿಯಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಜಲಾಯನಯ ಇಲಾಖೆಯಿಂದ ಪ್ರಗತಿ ವರದಿ ಮಂಡನೆ ಮಾಡಿದ್ದು, ಗಮನಕ್ಕೆ ಬರದೆ ನಾಲಾ ಬದು, ಕೆರೆ ಅಬಿವೃದ್ಧಿ ಮುಂತಾದ ಕಾಮಗಾರಿಗಳನ್ನು ಮಾಡಿದ್ದು ಸರಿಯಲ್ಲವೆಂದು, ಪಂಚಾಯ್ತಿ ಸದಸ್ಯರ, ಅಧ್ಯಕ್ಷರ ಗಮನಕ್ಕೆ ತಂದು ಕಾಮಗಾರಿಗಳನ್ನು ಮಾಡಬೇಕೆಂದು ತಿಳಿಸಿದರು. ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಹಾಸ್ಟೆಲ್ಗಳು ಅವ್ಯವಸ್ಥೆಯ ಆಗರವಾಗಿವೆ, ಸರ್ಕಾರ ವಿದ್ಯಾರ್ಥಿಗಳಿಗಾಗಿ ಲಕ್ಷಾಂತರ ರು.ಗಳನ್ನು ಖರ್ಚು ಮಾಡುತ್ತಿದ್ದು ಅಧಿಕಾರಿಗಳು ಹಣದ ದುರುಪಯೋಗ ಮಾಡುತ್ತಿದ್ದಾರೆಂದು ಆರೋಪಿಸಿದರು.