ಚಿಕನ್ ಅಂಗಡಿಗಳ ಮೇಲೆ ಡಿಸಿ ದಾಳಿ
ಕೋಲಾರ: ನಗರದ ಅಮ್ಮವಾರಿಪೇಟೆಯ ಮಾಂಸದ ಅಂಗಡಿಗಳಲ್ಲಿ ಚಿಕನ್ ಮಾರಾಟದಲ್ಲಿ ಗ್ರಾಹಕರನ್ನು ವಂಚಿಸಲಾಗುತ್ತಿದೆ, ಸ್ವಚ್ಛತೆ ಕಾಪಾಡುತ್ತಿಲ್ಲವೆಂಬ ದೂರಿನ ಮೇರೆಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಶನಿವಾರ ಅಂಗಡಿಗಳ ಮೇಲೆ ದಾಳಿ ಮಾಡಿ ಪರಿಶೀಲಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಸೈಯದ್ ಅನ್ಸರ್ ಕಲೀಂ, ಆಹಾರ ಇಲಾಖೆ ಉಪನಿರ್ದೇಶಕಿ ಗಿರಿಜಾ ದೇವಿ, ನಗರಸಭೆ ಆಯುಕ್ತ ಜಗದೀಶ್, ಆರೋಗ್ಯ ನಿರೀಕ್ಷಕ ರಮೇಶ್ ಅವರೊಂದಿಗೆ ದಿಢೀರ್ ದಾಳಿ ಮಾಡಿದ ಅವರು, ತೂಕ ಮಾಪನ ಯಂತ್ರಗಳನ್ನು ಪರಿಶೀಲಿಸಿ ಕೆಲವು ಕಡೆ ದೋಷವಿರುವ ಯಂತ್ರಗಳನ್ನು ಗಮನಿಸಿ ಸಿಡಿಮಿಡಿಗೊಂಡರಲ್ಲದೆ, ತೂಪ ಮಾಪನ ಇಲಾಖೆಯಿಂದ ಪ್ರಮಾಣ ಪತ್ರ ಇಲ್ಲದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು.
ಮಾಂಸದ ಅಂಗಡಿಗಳ ಬಳಿ ಸ್ವಚ್ಛತೆ ಇಲ್ಲದಿರುವುದನ್ನು ಹಾಗೂ ಚರಂಡಿಗಳಿಗೆ ಮಾಂಸದ ತ್ಯಾಜ್ಯಗಳನ್ನು ಎಸೆದಿರುವುದನ್ನು ಗಮನಿಸಿ ಅಂಗಡಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಅಂಗಡಿಗಳ ಪರವಾನಗಿ ನವೀಕರಣ ಮಾಡಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಅಲ್ಲಿನ ನಾಗರಿಕರು ನೀರಿನ ಸಮಸ್ಯೆ, ಸ್ವಚ್ಛತೆ ಬೀದಿ ದೀಪಗಳ ಸಮಸ್ಯೆ ತಿಳಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಜನತೆಯ ಸಮಸ್ಯೆ ನಿವಾರಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.