ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಿಸಿಯಂತೆ ನೀವು ಜಾಗೃತರಾಗಿ

Mainashree
Updated On : 22 Feb 2014, 11:33 am

ಕೋಲಾರ: ರಸ್ತೆಗಳ ಗುಣಮಟ್ಟ ಪರೀಕ್ಷೆಗಾಗಿ ಇತ್ತೀಚೆಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಹಾರೆ ಹಿಡಿದು ಬೀದಿಗೆ ಇಳಿದಿದ್ದರು. ಇದೇ ರೀತಿ ಗ್ರಾಹಕರು ಯಾವುದೇ ಒಂದು ವಸ್ತು ಖರೀದಿ ಮಾಡಿದಾಗ ಅದರ ಗುಣಮಟ್ಟ ಮತ್ತು ಪ್ರಮಾಣವನ್ನು ಪರೀಕ್ಷೆ ಮಾಡಲು ಧೈರ್ಯ ತೋರಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ರೇಣುಕಾ ಪ್ರಸಾದ್ ಗ್ರಾಹಕರಿಗೆ ಕರೆ ನೀಡಿದರು.
ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಆಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯಿಂದ ಹಮ್ಮಿಕೊಂಡಿದ್ದ ಗ್ರಾಹಕ ಹಕ್ಕುಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲಾಧಿಕಾರಿಗಳು ತಾವೇ ಖುದ್ಧು ರಸ್ತೆಗಳ ಗುಣಮಟ್ಟ ಪರಿಶೀಲನೆ ಮಾಡಿರುವುದರಿಂದ ಕಾಮಗಾರಿ ನಡೆಸುತ್ತಿರುವವರಿಗೆ ಎಚ್ಚರಿಕೆ ಮೂಡಿಸಿದಂತಾಗಿದೆ, ಈ ರೀತಿಯ ಕ್ರಮಗಳು ಮುಂದುವರೆಯಲಿ ಎಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಪ್ರೋತ್ಸಾಹಿಸಿದರು.
ಗ್ರಾಹಕರು ಯಾವುದೇ ವಸ್ತು, ಪದಾರ್ಥ ಕೊಂಡಾಗ ಅದಕ್ಕೆ ಕಡ್ಡಾಯವಾಗಿ ರಸೀದಿ ಪಡೆಯಬೇಕು, ಇದರಿಂದ ಕೊಂಡ ವಸ್ತು ಒಂದು ವೇಳೆ ಕಳಪೆಯಾಗಿದ್ದಲ್ಲಿ ಮತ್ತೊಂದು ವಸ್ತು ಖರೀದಿಗೆ ಇಲ್ಲವೇ ಮಾರಾಟಗಾರರ ಮೇಲೆ ಪ್ರಕರಣ ದಾಖಲಿಸಲು ಅನುಕೂಲವಾಗುತ್ತದೆ ಎಂದರು.
ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಿ.ಕೆ. ರವಿ, ಪ್ರತಿಯೊಬ್ಬ ಗ್ರಾಹಕನಿಗೆ ಕಾನೂನು ಅರಿವು ಇರಬೇಕು, ತಾವು ಖರೀದಿ ಮಾಡುವ ವಸ್ತುವಿನ ಬಗ್ಗೆ ಜಾಗ್ರತೆ ವಹಿಸದಿದ್ದರೆ ಮೋಸ ಹೋಗುವ ಸಂಭವ ಹೆಚ್ಚೆಂದು ತಿಳಿಸಿದರು.
ತೂಕ ಮಾಪನ ಯಂತ್ರಗಳ ಬಗ್ಗೆಯೂ ಗ್ರಾಹಕರು ಎಚ್ಚರವಹಿಸಬೇಕು, ಒಂದು ವೇಳೆ ವಂಚನೆ ಅಥವಾ ಮೋಸಕ್ಕೆ ಒಳಗಾಗಿದ್ದರೆ ಸೂಕ್ತವಾದ ದಾಖಲೆಗಳ ಮೂಲಕ ಕಾನೂನು ಹೋರಾಟ ನಡೆಸಲು ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರ ವೇದಿಕೆಯ ಮೂಲಕ ನ್ಯಾಯ ಪಡೆಯಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಸೈಯದ್ ಅನ್ಸರ್ಕ್‌ಲೀಂ, 1986ರಲ್ಲಿ ಗ್ರಾಹಕರ ಹಕ್ಕುಗಳ ಕಾಯಿದೆ ಜಾರಿಗೆ ಬಂದಿದೆ, ಯಾರಲ್ಲಿ ಜ್ಞಾನ ಇರುತ್ತದೋ ಅವರು ಯಾರಿಂದಲೂ ಮೋಸ ಹೋಗಲು ಸಾಧ್ಯವಿಲ್ಲ, ಗ್ರಾಹಕರ ವ್ಯಾಜ್ಯಗಳು ಸಿವಿಲ್ ಕೋರ್ಟಿನಲ್ಲಿ ಬೇಗನೆ ಇತ್ಯರ್ಥವಾಗುವುದಿಲ್ಲವೆಂಬ ಕಾರಣಕ್ಕೆ ಗ್ರಾಹಕರ ವೇದಿಕೆ ರಚನೆ ಮಾಡಲಾಗಿದ್ದು ಮೋಸ ಹೋಗುವ ಗ್ರಾಹಕರು ದೂರು ನೀಡಿದಲ್ಲಿ 3 ಇಲ್ಲವೇ 5 ತಿಂಗಳಲ್ಲಿ ವ್ಯಾಜ್ಯ ಇತ್ಯರ್ಥ ಮಾಡಿ ಪರಿಹಾರ ದೊರಕಿಸಿಕೊಡುತ್ತೇವೆಂದು ಹೇಳಿದರು.
ಸುಳ್ಳು ಜಾಹಿರಾತಿಗೆ ಮರಳಾಗಬೇಡಿ, ಯಾವುದೇ ವಕೀಲರ ಸಹಾಯ ಇಲ್ಲದೆ ತಾವೇ ಖುದ್ಧಾಗಿ ದೂರು ಸಲ್ಲಿಸಬಹುದು, ಕನ್ನಡದಲ್ಲೇ ಅರ್ಜಿಗಳನ್ನು ನೀಡಲು ಅವಕಾಶ ಉಂಟು, ಯಾವುದೇ ವಸ್ತು ಖರೀದಿ ಮಾಡಿದರೂ ಅದಕ್ಕೆ ರಸೀದಿ ಪಡೆದಲ್ಲಿ ವಂಚನೆಯಿಂದ ಪಾರಾಗಬಹುದು ಜೊತೆಗೆ ದೇಶಕ್ಕೆ ಪರೋಕ್ಷವಾಗಿ ತಮ್ಮಿಂದ ಸಹಾಯವಾಗುತ್ತದೆ ಎಂದರು.
ಎಟಿಎಂಗಳಲ್ಲಿ ಹಣ ಪಡೆಯುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು, ನಿಮ್ಮ ಎಟಿಎಂ ಕಾರ್ಡುಗಳನ್ನು ನಕಲಿ ಮಾಡಿ ನಿಮ್ಮ ಬ್ಯಾಂಕ್ಖಾತೆಯಲ್ಲಿನ ಹಣ ಲಪಟಾಯಿಸುವ ಖದೀಮರು ಇದ್ದಾರೆಂದು ತಿಳಿಸಿದರು.
ಆಹಾರ ಇಲಾಖೆಯ ಉಪನಿರ್ದೇಶಕಿ ಜಿ. ಗಿರಿಜಾ ದೇವಿ ಪ್ರಸ್ತಾವಿಕವಾಗಿ ಮಾತನಾಡಿದರು, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಮಹಿಳಾ ಸಮಾಜದ 9ನೇ ತರಗತಿ ವಿದ್ಯಾರ್ಥಿನಿ ಕವನ, ತೊಟ್ಲಿ ಗ್ರಾಮದ ಶಾಂತಿ ನಿಕೇತನದ ಹರಿಕೃಷ್ಣ ಹಾಗೂ ಸ್ಫೂರ್ತಿ ಪ್ರೌಢಶಾಲೆಯ ಕೆ. ಪ್ರಿಯದರ್ಶಿನಿ ಅವರಿಗೆ ಬಹುಮಾನ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement