ಎತ್ತಿನಹೊಳೆ: ಮಾ.3 ರಂದು ಶಿಲಾನ್ಯಾಸ
ಕನ್ನಡಪ್ರಭ ವಾರ್ತೆ ್ಣ ಕೋಲಾರ ್ಣ ಫೆ.23
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ರೂಪಿಸಿರುವ ಎತ್ತಿನಹೊಳೆ ಯೋಜನೆಗೆ ಮಾ.3 ರಂದು ಶಂಕುಸ್ಥಾಪನೆ ನೆರವೇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಅವರು ಭಾನುವಾರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿ, ಬಯಲು ಸೀಮೆಗೆ ಸೇರಿದ ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯ ತೀವ್ರತೆ ಸರ್ಕಾರದ ಗಮನಕ್ಕೆ ಬಂದಿದೆ. ಜನತೆಗೆ ಕೊಟ್ಟ ವಚನ ತಪ್ಪುವುದಿಲ್ಲ, ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಕಾರ್ಯಕ್ರಮ ತೆಗೆದುಕೊಂಡಿದೆ, ಎತ್ತಿನ ಹೊಳೆ ಯೋಜನೆಗಾಗಿ ಈ ಹಿಂದೆ ನಿಗದಿಯಾಗಿದ್ದ ಯೋಜನಾ ವೆಚ್ಚದ ಗಾತ್ರವನ್ನು 12,900 ಕೋಟಿಗೆ ನಿಗದಿ ಮಾಡಲಾಗಿದೆ, ಡಿಪಿಆರ್ ಮುಗಿಸಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಹ ಸಿಕ್ಕಿದ್ದು ಮಾರ್ಚ್ 3 ರಂದು ಬೆಳಿಗ್ಗೆ 10 ಗಂಟೆಗೆ ಶಂಕುಸ್ಥಾಪನೆ ಖಚಿತವೆಂದು ಭರವಸೆ ನೀಡಿದರು.
ಎತ್ತಿನ ಹೊಳೆ ಯೋಜನೆಯ ಮೂಲಕ ಶುದ್ಧವಾದ ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಹೆಚ್ಚಳಕ್ಕೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ, ಇದೇ ರೀತಿ ಎಲೆಮಲ್ಲಪ್ಪ ನೀರಿನ ಯೋಜನೆ ಜಾರಿಗೂ ಸರ್ಕಾರ ಬದ್ಧವಾಗಿದ್ದು, ಯೋಜನೆಗೆ ಸಂಬಂಧಿಸಿದ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿಕೊಟ್ಟಲ್ಲಿ ಯೋಜನೆಗೆ ಮಂಜೂರಾತಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ವೇದಿಕೆಯಲ್ಲಿದ್ದ ಉನ್ನತಮಟ್ಟದ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಆಡಳಿತಕ್ಕೆ ಸೂಚಿಸಿದರು.
ಎಲೆಮಲ್ಲಪ್ಪ ಯೋಜನೆಯ ವಿಚಾರದಲ್ಲಿ ಜಿಲ್ಲಾ ಆಡಳಿತ ಹಿರಿಯ ಹಾಗೂ ಅನುಭವಿ ಶಾಸಕ ರಮೇಶ್ ಕುಮಾರ್ ಅವರ ಸಲಹೆಗಳನ್ನು ಪಡೆಯುವಂತೆಯೂ ತಿಳಿಸಿದರು.
ವೈದ್ಯಕೀಯ ಕಾಲೇಜು: ಈ ಸಾಲಿನ ಬಜೆಟ್ನಲ್ಲಿ ಆರು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ವರ್ಷದ ಬಜೆಟ್ನಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುತ್ತೇನೆ. ಇದಕ್ಕಾಗಿ ಜಾಗ ಕೊಡಿಸಲು ಶಾಸಕ ರಮೇಶ್ ಕುಮಾರ್ ಬದ್ಧರಾಗಿರುವುದು ಸಂತಸವನ್ನುಂಟು ಮಾಡಿದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಸ್ಥಾಪನೆ ನಮ್ಮ ಸರ್ಕಾರದ ಉದ್ದೇಶವಾಗಿದೆ, ಜನರಿಗೆ ಆರೋಗ್ಯ ಸೇವೆ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಂದಿನ ವರ್ಷ ಶ್ರೀನಿವಾಸಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ.ಆರ್. ರಮೇಶ್ ಕುಮಾರ್ ವಹಿಸಿದ್ದರು. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯ ಸರ್ಕಾರದ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ನಜೀರ್ ಅಹಮ್ಮದ್, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸಚಿವ ನಿಸಾರ್ ಅಹಮ್ಮದ್, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಬಿಸ್ಸೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ಕುಮಾರ್, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ, ಕೋಚಿಮುಲ್ ಅಧ್ಯಕ್ಷ ಕೆ. ಗುಡಿಯಪ್ಪ, ಶ್ರೀನಿವಾಸಪುರ ತಾಪಂ ಅಧ್ಯಕ್ಷ ಡಿ. ಕೃಷ್ಣಾರೆಡ್ಡಿ, ವಾಣಿ ಕೃಷ್ಣಾರೆಡ್ಡಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀನಿವಾಸಚಾರಿ, ಐಜಿಪಿ ಉಲ್ಫಾತ್ ಹುಸೇನ್, ಜಿಪಂ ಸಿಇಒ ವಿನೋತ್ಪ್ರಿಯ ಇದ್ದರು.