ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವೈಭವದ ಶ್ರೀನಿವಾಸ ಕಲ್ಯಾಣೋತ್ಸವ

Mainashree
Updated On : 23 Feb 2014, 10:59 am

ಬಂಗಾರಪೇಟೆ: ಪಟ್ಟಣದಲ್ಲಿ ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಯ ಶ್ರೀನಿವಾಸ ಕಲ್ಯಾಣೋತ್ಸವ ಭಾನುವಾರ ಸಹಸ್ರಾರು ಭಕ್ತಾಧಿಗಳ ನಡುವೆ ವೈಭವದಿಂದ ನೆರವೇರಿತು.
ಲೋಕ ಕಲ್ಯಾಣಕ್ಕಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ಅವರ ಮಿತ್ರ ಬಳಗದಿಂದ ಪಟ್ಟಣದಲ್ಲಿ ಎರಡನೇ ಬಾರಿಗೆ ತಿರುಪತಿ ಶ್ರೀವೆಂಕಟೇಶ್ವರಸ್ವಾಮಿಯ ಶ್ರೀನಿವಾಸ ಕಲ್ಯಾಣೋತ್ಸವ ತಿರುಪತಿ ಪುರೋಹಿತರಿಂದಲೇ ನರೆವೇರಿದ್ದು. ಕಳೆದ ಐದು ವರ್ಷಗಳ ಹಿಂದೆ ಒಮ್ಮೆ ತಿರುಪತಿಯಿಂದ ಉತ್ಸವ ಮೂರ್ತಿಗಳನ್ನು ತಂದು ಕಲ್ಯಾಣೋತ್ಸವ ನಡೆಸಲಾಗಿತ್ತು. ಇಂದು ಮತ್ತೆ ಅದೇ ದೇವರ ವಿಗ್ರಹಗಳನ್ನು ತಂದು ಪೂಜಿಸಲಾಯಿತು.
ಪಟ್ಟಣದ ಹೊರವಲಯದಲ್ಲಿರುವ ಜೈನ್ ಶಾಲೆಯ ಮೈದಾನದಲ್ಲಿ ಕಲ್ಯಾಣೋತ್ಸವಕ್ಕಾಗಿಯೇ ವಿಶೇಷವಾಗಿ ಸಿದ್ಧಪಡಿಸಿದ್ದ ಭವ್ಯ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು.
ಬೆಂಗಳೂರಿನ ನುರಿತ ಕಲಾವಿದರ ತಂಡ ಕಳೆದ ವಾರದಿಂದ ಅತ್ಯಾಕರ್ಷಕ ವೇದಿಕೆ ಸಿದ್ಧಪಡಿಸಿದ್ದರು. ಚಿನ್ನ ಲೇಪಿಸಿದಂತೆ ಕಾಣುವ ಕಲ್ಯಾಣ ಮಂಟಪ, ಬಾಗಿಲುಗಳು, ಗರುಡ, ಹನುಮನ ಪ್ರತಿಕೃತಿಗಳು, ವೆಂಕಟರಮಣಸ್ವಾಮಿ ಬಗ್ಗೆ ಅನ್ನಮಯ್ಯ ಸಂಕೀರ್ತನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಕಲ್ಯಾಣೋತ್ಸವಕ್ಕೆ ಬಂದಿದ್ದ ಸುಮಾರು 20ಸಾವಿರ ಭಕ್ತಾಧಿಗಳಿಗೆ ತಿರುಪತಿ ಲಾಡು ಮತ್ತು ಕ್ಯಾಲೆಂಡರ್ ಪ್ರಸಾದವಾಗಿ ವಿತರಿಸಲಾಯಿತು. ಸುಮಾರು 53ಸಾವಿರ ಲಡ್ಡು, ಎರಡು ಸಾವಿರ ಕಲ್ಯಾಣೋತ್ಸವ ಲಡ್ಡು, ವಡೆ ಜೊತೆಗೆ ನೀರಿನ ಬಾಟಲಿ ಕೊಡಲಾಯಿತು.
ಸಂಜೆ 6ಗಂಟೆಗೆ ಪೂಜೆ ಕಾರ್ಯಗಳು ನಡೆದು ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಸಾಗಿತು, ಕಲ್ಯಾಣೋತ್ಸವ ಪ್ರಯುಕ್ತ ಬೆಳಗ್ಗೆಯಿಂದ ಸಂಜೆವರೆಗೂ ಎಡಬಿಡದೆ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಲ್ಯಾಣೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ತೊಂದರೆಯಾಗಂತೆ ಶಾಮ್ ಆಸ್ಪತ್ರೆವತಿಯಿಂದ ಉಚಿತ ಲಘು ತಪಾಸಣೆ ಕೇಂದ್ರ  ತೆರೆಯಲಾಗಿತ್ತು. ಇದೇ ಸಂದರ್ಭದಲ್ಲಿ 14 ಜೋಡಿಗಳ ವಿವಾಹವನ್ನು ಎಸ್.ಎನ್. ಚಾರಿಟೇಬಲ್ ಟ್ರಸ್ಟ್‌ವತಿಯಿಂದ ನಡೆಸಲಾಯಿತು. ಈ ಕಾರ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಎಸ್.ಎನ್. ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಕೆ. ಚಂದ್ರಾರೆಡ್ಡಿ, ಪಲ್ಲವಿಮಣಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement