ಸುದ್ದಿ ಸಂಕ್ಷೇಪ
ಇಂದು ಬೃಹತ್ ಪ್ರತಿಭಟನೆ
ಮಾಲೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ಮಾಲೂರು ತಾಲೂಕಿನಿಂದ 500 ಕ್ಕೂ ಹೆಚ್ಚು ಕಾರ್ಯಕರ್ತರು ತೆರಳಲಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ತಾಳಕುಂಟೆ ಆರ್.ಪ್ರಕಾಶ್ ಹೇಳಿದ್ದಾರೆ. ರಾಜ್ಯದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಯಾಗಬೇಕು. ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಪಾರಸು ಸಲ್ಲಿಸಬೇಕು. ರಾಜ್ಯದ 15 ಲಕ್ಷ ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿರುವವರನ್ನು ತೆರವುಗೊಳಿಸಿ ರಾಜ್ಯದ ಕೃಷಿ, ಕೂಲಿ ಕಾರ್ಮಿಕರಿಗೆ ಹಂಚಿಕೆ ಮಾಡುವುದು ಸೇರಿದಂತೆ ಮೀಸಲಾತಿ ನಿಯಮದಲ್ಲಿ ಖಾಸಗಿ, ಸಹಕಾರಿ, ಗುತ್ತಿಗೆ, ಕ್ಷೇತ್ರದಲ್ಲಿ ದಲಿತರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಲು ಕೋಲಾರದಲ್ಲಿ ಸೋಮವಾರ ಭಾರಿ ಪ್ರತಿಭಟನೆ ರ್ಯಾಲಿ ಹಮ್ಮಿಕೊಂಡಿದೆ. ಸರ್ವಜನ ಸಮಾನತೆಯ ಬಾಳ್ವೆಗಾಗಿ ಹಮ್ಮಿಕೊಳ್ಳುತ್ತಿರುವ ಪ್ರತಿಭಟನೆಯಲ್ಲಿ ತಾಲೂಕಿನ ಪ್ರಗತಿ ಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ. ತಾಲೂಕು ಸಂಚಾಲಕ ನಾರಾಯಣಸ್ವಾಮಿ, ಪಿ.ಜಿ. ವೆಂಕಟೇಶ್, ಶಿವಾರ ನಾಣಿ, ಯಲುವಳ್ಳಿ ವೆಂಕಟೇಶ್, ದೂಡ್ಡಮಲ್ಲೆ ರಾಘವೇಂದ್ರ ಇದ್ದರು.
ಅಂಬಿ ಆರೋಗ್ಯ ಸುಧಾರಣೆಗೆ ಪೂಜೆ
ಬಂಗಾರಪೇಟೆ: ಕನ್ನಡ ಚಿತ್ರರಂಗದ ದಿಗ್ಗಜ ಅಂಬರೀಶ್ ಆರೋಗ್ಯ ಸುಧಾರಣೆಗಾಗಿ ಇಲ್ಲಿನಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಬೇಗ ಗುಣಮುಖರಾಗಲೆಂದು ಹಾರೈಸಿದರು. ಅಂಬಿ ಬೇಗನೆ ಗುಣಮುಖರಾಗಿ ಮತ್ತೆ ರಾಜಕೀಯ ಮತ್ತು ಚಿತ್ರರಂಗದಲ್ಲಿ ಮಿಂಚಲಿ ಎಂದು, ಇಲ್ಲಿನ ಡಾ.ಅಂಬರೀಶ್ ಅಭಿಮಾನಿಗಳಾದ ರಾಕ್ ರಮೇಶ್, ವೆಂಕಟೇಶ್, ಕುಮರೇಶ್ ಮತ್ತಿತರರು ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಕಾಂಗ್ರೆಸ್‌ಗೆ ಆಯ್ಕೆ
ಗುಡಿಬಂಡೆ: ತಾಲೂಕು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷರಾಗಿ ಬೀಚಗಾನಹಳ್ಳಿ ರಾಮಚಂದ್ರಪ್ಪ ಹಾಗೂ ಉಪಾಧ್ಯಕ್ಷರಾಗಿ ಅಪ್ಪಿರೆಡ್ಡಿಹಳ್ಳಿಯ ವೆಂಕಟೇಶ್‌ರನ್ನು ನೇಮಿಸಲಾಗಿದೆ ಎಂದು ಘಟಕದ ಜಿಲ್ಲಾಧ್ಯಕ್ಷ ಸಿ.ಟಿ. ಸಿದ್ದಲಿಂಗಾಚಾರ್ ತಿಳಿಸಿದ್ದಾರೆ.
ಪತ್ರಕರ್ತರ ಸಂಘದಿಂದ ಸಿಎಂಗೆ ಆತ್ಮೀಯ ಸನ್ಮಾನ
ಕೋಲಾರ: ರಾಜ್ಯ ಬಜೆಟ್‌ನಲ್ಲಿ ಪತ್ರಕರ್ತರಿಗೆ ಆರೋಗ್ಯ ವಿಮೆ ಯೋಜನೆ ಪ್ರಕಟಣೆ ಹಾಗೂ ಪಿಂಚಣಿಯನ್ನು 3 ಸಾವಿರದಿಂದ 6 ಸಾವಿರಕ್ಕೆ ಹೆಚ್ಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಕೋಲಾರದ ಸಿಬಿಐಟಿ ಕಾಲೇಜಿಗೆ ಬಂದಿದ್ದ ಸಿಎಂ ಅವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್, ಪತ್ರಕರ್ತರಿಗೆ ನೀಡಿರುವ ಸಲವತ್ತುಗಳಿಂದಾಗಿ ಅನೇಕರಿಗೆ ಸಹಾಯವಾಗಲಿದೆ, ಇದೇ ರೀತಿ ಕೋಲಾರ ಪತ್ರಕರ್ತರ ಸಂಘದಿಂದ ಆಧುನಿಕ ಗ್ರಂಥಾಲಯ ಸ್ಥಾಪನೆಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಎಂ ಏಪ್ರಿಲ್ 1 ರಿಂದಲೇ ವಿಮಾ ಯೋಜನೆ ಜಾರಿಗೆ ಬರಲಿದೆ, ಕೋಲಾರ ಪತ್ರಕರ್ತರ ಸಂಘದಲ್ಲಿ ಗ್ರಂಥಾಲಯ ಸ್ಥಾಪನೆಗೆ ಅಗತ್ಯ ನೆರವು ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ಪಿ. ಪ್ರಭಾಕರ್, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗಣೇಶ್, ಖಜಾಂಚಿ ಮುನಿರಾಜ್ ಹಾಗೂ ಪದಾಧಿಕಾರಿಗಳು, ಪತ್ರಕರ್ತರು ಇದ್ದರು.