ಸುದ್ದಿ ಸಂಕ್ಷೇಪ
ಗ್ರಾಪಂ ಸದಸ್ಯರ ಆಯ್ಕೆ
ಟೇಕಲ್: ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ದುಡುವನಹಳ್ಳಿಯ ಗ್ರಾಪಂ ಸದಸ್ಯ ಸ್ಥಾನ ತೆರವಾಗಿದ್ದ ಹಿನ್ನಲೆಯಲ್ಲಿ ಚುನಾವಣೆ ನಡೆಸಲಾಯಿತು. ಅದೇ ಗ್ರಾಮದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಚಿಕ್ಕತಿಮ್ಮಕ್ಕ ಅವಿರೋಧ ಆಯ್ಕೆಯಾಗಿದ್ದು ಇವರನ್ನು ಶಾಸಕ ಕೆ.ಎಸ್. ಮಂಜುನಾಥಗೌಡ ಅಭಿನಂದಿಸಿದರು. ಕೆ.ವೈ. ನಂಜೇಗೌಡ ಮಾತನಾಡಿದರು. ಜಿಪಂ ಸದಸ್ಯೆ ಯಶೋಧಕೃಷ್ಣಮೂರ್ತಿ, ಮಂಜುನಾಥಗೌಡ, ರುದ್ರಪ್ಪ, ರಾಮಮ್ಮ, ಶಿವಣ್ಣ, ಸುಬ್ಬಣ್ಣ, ವೆಂಕಟೇಶಪ್ಪ, ಡಿ.ಟಿ.ದೇವರಾಜ್ ಇದ್ದರು.
ಎನ್ಎಸ್ಎಸ್
ಶಿಬಿರ
ಟೇಕಲ್: ಬೆಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಸೇವಾ ಶಿಬಿರವನ್ನು ಸಂಭ್ರಮ ಕಾಲೇಜು ವತಿಯಿಂದ 24 ರಿಂದ ಮುಂದಿನ ತಿಂಗಳು 2ನೇ ತಾರೀಖಿನವರೆಗೂ ಕ್ಷೇತ್ರೇನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿಗೆ. 24 ರಂದು ಶಾಸಕ ಕೆ.ಎಸ್. ಮಂಜುನಾಥಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಭ್ರಮ ಕಾಲೇಜಿನ ಪ್ರಾಂಶುಪಾಲೆ ಕೆ. ಕವಿತಾ ಹಾಗೂ ಬನಹಳ್ಳಿ ಗ್ರಾಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ವಹಿಸಿದ್ದಾರೆ.
ಖಾತ್ರಿ ಕೂಲಿಗಳಿಗೆ ತೀವ ತೊಂದರೆ
ತಿಪಟೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಇ.ಎಫ್.ಎಂ.ಎಸ್) ಅಂತರ್ಜಾಲ ಮೂಲಕ ನೇರ ನಗದು ಪಾವತಿಗೆ ವ್ಯವಸ್ಥೆ ಮಾಡಿದ್ದು, ಎಂ.ಜಿ.ಎನ್.ಆರ್.ಇ.ಜಿ.ಎ. ಯೋಜನೆಯಡಿಯಲ್ಲಿ ಕೆಲಸ ಮಾಡುವ ಕೂಲಿ ಆಳುಗಳ ಪಾಲಿಗೆ ಓಯಸಿಸ್ ಆಗಿ ಪರಿಣಮಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಗಮನಹರಿಸಬೇಕೆಂದು ಜನವಿಕಾಸ ತಾಲೂಕು ಅಧ್ಯಕ್ಷರಾದ ಶಿವಪ್ಪ ತಿಳಿಸಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ವಿದ್ಯುತ್ ಸೌಲಭ್ಯ ಸರಿಯಾಗಿಲ್ಲದೆ ಕೆಲವೊಮ್ಮೆ ಶಿಫ್ಟ್ ಮೂಲಕ ಕರೆಂಟ್ ಇದ್ದಾಗ ಗ್ರಾ.ಪಂ. ಸಿಬ್ಬಂದಿಯ ಪಾಡೇನು. ಕಣ್ಣುಮುಚ್ಚಾಲೆ ಕರೆಂಟ್ ನಡುವೆ ಬೇಕೋ ಬೇಡವೋ ಎಂದು ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಕೆಲಸ ಮಾಡಬೇಕೆನ್ನುವ ಇಚ್ಛೆ ಇದ್ದರೂ ಕರೆಂಟ್ ಇರುವುದಿಲ್ಲ. ಕರೆಂಟ್ ಇಲ್ಲದಿದ್ದರೆ ಯಾವಾಗ ಹಣ ಬಿಡುಗಡೆ ಮಾಡುತ್ತಾರೆಂಬ ಮಾಹಿತಿ ಇಲ್ಲದೆ ಕೂಲಿ ಮಾಡಿದ ಕೂಲಿ ಆಳುಗಳಿಗೆ ಉತ್ತರ ನೀಡಲು ಅಧಿಕಾರಿಗಳು ಒದ್ದಾಡುತ್ತಿದ್ದಾರೆ. ಮೇಲಾಧಿಕಾರಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ಇದು ಒಂದು ಗ್ರಾಮ ಪಂಚಾಯಿತಿಯ ಗೋಳಲ್ಲ. ರಾಜ್ಯದಲ್ಲಿರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಗೋಳಾಗಿದೆ. ಆದ್ದರಿಂದ ಈ ವ್ಯವಸ್ಥೆಯಲ್ಲಿ ಆಯಾ ತಾಲೂಕುಗಳಿಗೆ ಹಣವನ್ನು ಬಿಡುಗಡೆ ಮಾಡಿ. ಸಂಬಂಧಪಟ್ಟ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಕಾರ್ಯ ನಿರ್ವಹಿಸಿರುವ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೂಲಿ ಸಿಗುವ ವ್ಯವಸ್ಥೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಶಿವಪ್ಪ ಮನವಿ ಮಾಡಿದ್ದಾರೆ.
ಕೋಳಿ ಫಾರಂ ಸ್ಥಳಾಂತರಕ್ಕೆ ಆಗ್ರಹ
ಶಿರಾ: ಕಳೆದ ಆರು ದಿನಗಳಿಂದಲೂ ಶಿರಾ ನಗರದ ತಹಸೀಲ್ದಾರ್ ಕಚೇರಿಯ ಮುಂದೆ ಹಲ್ಕೂರು ಕೋಳಿ ಫಾರಂ ಸ್ಥಳಾಂತರಿಸುವಂತೆ ಒತ್ತಾಯಿಸಿ ಆ ಭಾಗದ ರೈತರು ನಡೆಸುತ್ತಿರುವ ನಿರಂತರ ಪ್ರತಿಭಟನಾ ಸ್ಥಳಕ್ಕೆ ಬಂದು ವಿದ್ಯಾರ್ಥಿಗಳು ಕೂಡ ರೈತರ ಪ್ರತಿಭಟನೆಗೆ ಸಾಥ್ ನೀಡಿದರು. ಕಳೆದ 6 ದಿನಗಳಿಂದಲೂ ತಹಸೀಲ್ದಾರ್ ಕಚೇರಿ ಮುಂದೆ ಹಲ್ಕೂರು ಕೋಳಿ ಫಾರಂನಿಂದ ಆಗುತ್ತಿರುವ ಅನಾರೋಗ್ಯ ಹಾಗೂ ರೈತರ ಸಂಕಷ್ಟಗಳನ್ನು ಈಡೇರಿಸುವಂತೆ ಹಾಗೂ ಕೋಳಿ ಫಾರಂನಿಂದ ನೊಣಗಳ ಕಾಟ ಹೆಚ್ಚಾಗಿದ್ದು, ಕೂಡಲೇ ಅದನ್ನು ಮುಚ್ಚಿಸುವಂತೆ ಹಲ್ಕೂರು-ಚೆನ್ನನಕುಂಟೆ, ಅರೇಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸದರಿ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಹಲ್ಕೂರು ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಕೂಡ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ದೇಶದ ಪ್ರಗತಿಗೆ ಮಹಿಳೆಯರ ಪಾತ್ರ ಅಗತ್ಯ: ನ್ಯಾ .ಕೆ.ಎಸ್. ಶಿಲ್ಪ
ತಿಪಟೂರು: ಇಂದಿನ ಮಾನವ ಸಮಾಜ ತನ್ನ ನೈತಿಕ ನೆಲೆಗಟ್ಟಿನಲ್ಲಿ ಕುಸಿತವನ್ನು ಕಂಡುಕೊಂಡಿದ್ದು, ಈ ವ್ಯವಸ್ಥೆಯನ್ನು ಸರಿಪಡಿಸುವ ಸಲುವಾಗಿ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಕೆ.ಎಸ್. ಶಿಲ್ಪ ತಿಳಿಸಿದರು.
ತಾಲೂಕಿನ ನೊಣವಿನಕೆರೆಯ ಸ್ತ್ರೀಶಕ್ತಿ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯಿದೆ ಹಾಗೂ ಹೋಬಳಿ ಮಟ್ಟದ ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಸರ್ವಾಂಗೀಣ ಪ್ರಗತಿಗೆ ಮಹಿಳೆಯರ ಅದರಲ್ಲೂ ಸುಶಿಕ್ಷತಿ ಹೆಣ್ಣು ಮಕ್ಕಳ ಅಗತ್ಯತೆ ಮತ್ತು ಕೊಡುಗೆ ಬಹಳ ಮುಖ್ಯವಾಗಿದೆ. ಉನ್ನತ ಶಿಕ್ಷಣ ಪಡೆದುಕೊಳ್ಳುವತ್ತ ಗಮನಹರಿಸಬೇಕು. ದಿನ ನಿತ್ಯದ ಮತ್ತು ಸ್ವಾಭಿಮಾನಿ ಬದುಕಿಗೆ ಅಗತ್ಯವಿರುವ ಕನಿಷ್ಠ ಕಾನೂನು ಜ್ಞಾನಗಳ ಅರಿವು ಬಹಳ ಮುಖ್ಯವಾಗಿದ್ದು, ಇಂತಹ ಶಿಬಿರಗಳ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ಸ್ವಾಮಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಮಲಮ್ಮ ವಹಿಸಿದ್ದರು. ಎಸಿಡಿಪಿಓ ಸುಂದರಮ್ಮ ಪ್ತಾಸ್ತಾವಿಕ ನುಡಿಗಳನ್ನಾಡಿದರು. ಜಯಶೀಲ, ಬಸವರಾಜು ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸದಸ್ಯರು ಭಾಗವಹಿಸಿದ್ದರು.