'ಜನತೆಯಲ್ಲಿ ಅರಿವು ಮೂಡಿಸಿ'
ಟೇಕಲ್: ಜನತೆಯಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ಸೇವಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಕೆಜೆಎಫ್ ಸಂಭ್ರಮ ಕಾಲೇಜು ಪ್ರಾಂಶುಪಾಲ ಕೆ. ಕವಿತ ಅಭಿಪ್ರಾಯಪಟ್ಟರು. ಕ್ಷೇತ್ರೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದಲ್ಲಿ ನಮ್ಮ ಕಾಲೇಜು ವತಿಯಿಂದ 7 ದಿನಗಳ ಶಿಬಿರ ಏರ್ಪಡಿಸಲಾಗಿದ್ದು, ಆರೋಗ್ಯ, ಕುಡಿಯುವ ನೀರು, ರಕ್ತದಾನ, ಸಾಮಾಜಿಕ ಪಿಡುಗು ಮುಂತಾದವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದರು. ಟೇಕಲ್ ತಾಪಂ ಸದಸ್ಯೆ ನಿರ್ಮಲಾ ಆಂಜಿನಪ್ಪ ಮಾತನಾಡಿ, ಕ್ಷೇತ್ರೇನಹಳ್ಳಿ ಗ್ರಾಮ ಮಾದರಿ ಗ್ರಾಮವಾಗಿದ್ದು ಇಂತಹ ಶಿಬಿರಗಳಿಂದ ಜನರಲ್ಲಿನ ತಿಳುವಳಿಕೆ ಹೆಚ್ಚಾಗುತ್ತದೆ ಎಂದರು. ಬನಹಳ್ಳಿ ಗ್ರಾಪಂ ಅಧ್ಯಕ್ಷ ಕೆ.ಎಂ. ರಾಮಕೃಷ್ಣಪ್ಪ ಮಾತನಾಡಿದರು. ಬಿ.ಜಿ. ಮುನಿಶಾಮಿಗೌಡ, ಕೆ.ಎನ್. ಲಕ್ಷ್ಮಣ್, ಉಪನ್ಯಾಸಕ ನಾಗರಾಜರೆಡ್ಡಿ, ರಾಮಪ್ಪ, ರಾಜಮ್ಮ ಗೋಪಾಲಪ್ಪ, ಟೇಕಲ್ ಆಂಜಿನಪ್ಪ, ಶಿಬಿರಾಧಿಕಾರಿ ಎಚ್.ಎಂ. ಉಮಾರಾಣಿ, ಮುಖ್ಯಶಿಕ್ಷಕ ಡಿ.ನಾರಾಯಣಸ್ವಾಮಿ, ಸಹಶಿಕ್ಷಕ ಎಂ.ಶ್ರೀನಿವಾಸ್ ಇದ್ದರು.