ದೂರುಗಳ ಬಗ್ಗೆ ಕ್ರಮ ಕೈಗೊಳ್ಳಿ: ಎಸ್ಪಿ ಚಂದ್ರಶೇಖರ್
ಗುಡಿಬಂಡೆ: ಸಾರ್ವಜನಿಕರ ದೂರುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರ ಗಮನ ಹರಿಸಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಲೋಕಯುಕ್ತ ಎಸ್ಪಿ ಚಂದ್ರಶೇಖರ್ ಹೇಳಿದರು. ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಕುಂದು ಕೊರತೆ ಸಭೆಯಲ್ಲಿ ಅಹವಾಲು ಸ್ವೀಕರಿಸಿ ಮಾತನಾಡಿ, ಸಾರ್ವಜನಿಕರು ಅಧಿಕಾರಿಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಾಗ ಸೂಕ್ತ ಸ್ಪಂದನೆ ನೀಡಬೇಕು. ಕಾಲ ಮಿತಿಯಲ್ಲಿ ಪರಿಹಾರ ಕಲ್ಪಿಸುವಂತಾಗಬೇಕೆಂದು ಅಭಿಪ್ರಾಯ ಪಟ್ಟರು. ನಂತರ ಕಂದಾಯ ಇಲಾಖೆ ಬಗ್ಗೆ ಹಿಂದಿನ ಸಭೆಯಲ್ಲಿ ನೀಡಿದ್ದ ಅರ್ಜಿಗಳ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಅರ್ಜಿದಾರರಿಗೆ ಆನುಕೂಲ ಮಾಡಿಕೊಡಬೇಕೆಂದು ತಹಸೀಲ್ದಾರರಿಗೆ ಸೂಚಿಸಿದರು. ಅಧಿಕಾರಿಗಳು ಲೋಕಾಯುಕ್ತ ಸಭೆ ನಡೆಯುವ ದಿನ ತಮ್ಮ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಹೇಳಿದ ಅವರು, ಕೇಳಿದ ತಕ್ಷಣ ಮಾಹಿತಿ ಒದಗಿಸಬೇಕೆಂದರು. ಸಭೆಯಲ್ಲಿ ಲೋಕಾಯುಕ್ತ ಡಿವ್ಯೆಎಸ್ಪಿ ಬೋಪಯ್ಯ ತಹಸೀಲ್ದಾರ್ ಶೈಲಜಾ ಹಾಗೂ ಎಲ್ಲಾ ಇಲಾಖಾ ಮುಖ್ಯಸ್ಥರು ಪಾಲ್ಗೊಂಡಿದ್ದರು.
ಬ್ಲೇಡ್ ಕಂಪನಿ:13 ಲಕ್ಷ ಪಂಗನಾಮ
ಬಂಗಾರಪೇಟೆ: ಮೊಬೈಲ್ಗೆ ವಿದೇಶದಿಂದ ಬಂದಿದ್ದ ತಪ್ಪು ಸಂದೇಶ ನಂಬಿ ವ್ಯಕ್ತಿಯೊಬ್ಬ 13ಲಕ್ಷ ರು.ಗಳನ್ನು ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ. ತಾಲೂಕಿನ ಕಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯ ಬಲಮಂದೆ ಗ್ರಾಮದ ಹರೀಶ್ ಎಂಬಾತನಿಗೆ ಕಳೆದ ವಾರ ವಿದೇಶದಿಂದ ಸಂದೇಶವೊಂದು ಬಂದು ಅದರಲ್ಲಿ ನಿಮ್ಮ ಮೊಬೈಲ್ ನಂಬರ್ಗೆ 50ಲಕ್ಷ ಬಹುಮಾನ ಬಂದಿದೆ ಎರಡು ದಿನಗಳಲ್ಲಿ ಡಿಪ್ಲಮ್ಯಾಟ್ ವೈಟ್ ಮಾರ್ಟಿನ್ ಎಂಬುವರ ಹಣವನ್ನು ತೆಗೆದುಕೊಂಡು ಭಾರತಕ್ಕೆ ಬರುವರು ಈ ಹಣವನ್ನು ಪಡೆಯಲು ನೀವು ಮೊದಲು ನಾವು ಸೂಚಿಸಿದ ಅಕೌಂಟಿಗೆ 18 ಸಾವಿರ ಹಾಕಬೇಕೆಂದು ಹೇಳಿದ್ದರು. ಇದನ್ನು ನಂಬಿದ ಹರೀಶ್ ಕೂಡಲೆ ಅವರು ಸೂಚಿಸಿದ್ದ ಅಕೌಂಟಿಗೆ 18ಸಾವಿರ ಹಾಕಿದ್ದರು. ನಂತರ ಕರೀಶ್ಮ ಅಗರಲಾವ್ ಎಂಬುವರು ಪೋನ್ ಮಾಡಿ ವಿದೇಶದಿಂದ ಹಣ ಬಂದಿದೆ ಅದನ್ನು ಭಾರತೀಯ ಹಣಕ್ಕೆ ಬದಲಾಯಿಸಲು 13ಲಕ್ಷ ಪಾವತಿಸಬೇಕು ಎಂದು ಹೇಳಿದ್ದರು. ಅದನ್ನೂ ಪಾವತಿಸಿದ ಹರೀಶ್ ಕೊನೆಗೆ ಮೋಸಹೋಗಿದ್ದು, ಕಾಮಸಮುದ್ರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೈಕ್ ಡಿಕ್ಕಿ ಎರಡು ಕುರಿ ಸಾವು
ಬಂಗಾರಪೇಟೆ: ತಾಲೂಕಿನ ಬಡಮಾಕನಹಳ್ಳಿ ಗ್ರಾಮದ ಶ್ರೀರಾಮಪ್ಪ ಮತ್ತು ನಾಗಭೂಷಣ್ ಎಂಬುವರು ಕುರಿಗಳನ್ನು ಹೊಡೆದುಕೊಂಡು ಹೂವರಸನಹಳ್ಳಿ ಬಳಿ ಬರುವಾಗ ಪಟ್ಟಣದಿಂದ ರಬಸವಾಗಿ ಬಂದ ಬೈಕ್ ಸವಾರನೊಬ್ಬ ಕುರಿಗಳ ಮೇಲೆ ಹರಿಸಿದರಿಂದ ಎರಡು ಕರಿಗಳು ಸ್ಥಳದಲ್ಲೇ ಮೃಪಟ್ಟಿವೆ. ನಾಗಭೂಷಣ ಎಂಬುವರಿಗೆ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಬೈಕ್ ಸವಾರ ನಂತರ ಗಾಡಿ ನಿಲ್ಲಿಸದೆ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಾಯಕಿಯ ಭೀಕರ ಕೊಲೆ
ಕೋಲಾರ: ವಾದ್ಯಗೋಷ್ಠಿಯೊಂದರಲ್ಲಿ ಗಾಯಕಿಯಾಗಿರುವ ನಗರದ ವೀರಾಂಜನೇಯ ನಗರದ ನಿವಾಸಿ ಸುನೀತ ಎಂಬುವರನ್ನು ದುಷ್ಕರ್ಮಿಗಳು ಕಲ್ಲಿನಿಂದ ತಲೆ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ಗಂಡ ಮಂಜು ದಾಂಪತ್ಯದಲ್ಲಿನ ವಿರಸದಿಂದ ಪತ್ನಿಯನ್ನು ತೊರೆದಿದ್ದು ಪುಟ್ಟ ಗಂಡು ಮಗುವಿನ ಪೋಷಣೆಗಾಗಿ ಸುನೀತ ವಾದ್ಯಗೋಷ್ಠಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಸೋಮವಾರ ವೀರಾಂಜನೇ ಯಸ್ವಾಮಿ ನಗರದ ರಸ್ತೆ ಬದಿಯಲ್ಲಿ ಸುನೀತಳ ಶವ ಪತ್ತೆಯಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ, ನಗರಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮಾಲೂರಿನಲ್ಲಿ ಹಿರಿಯರ ಆರೋಗ್ಯಕ್ಕಾಗಿ ನಡಿಗೆ ಕಾರ್ಯಕ್ರಮ
ಮಾಲೂರು: ಕ್ರೀಡೆ ದೈಹಿಕ ಕ್ಷಮತೆಗೆ ಸಹಕಾರಿಯಾಗಿರುವುದರಿಂದ ವಯಸ್ಸಿನ ನಿರ್ಭಂಧವಿಲ್ಲದೆ ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸ್ಪೂರ್ತಿ ಸ್ಟೋರ್ಟ್ಸ್ ಅಸೋಷಿಯೇಷನ್ ಅಧ್ಯಕ್ಷ ಚೌಡಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಹಿರಿಯರ ಆರೋಗ್ಯಕ್ಕಾಗಿ ನಡೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಹಿಂದೆ ಉತ್ತಮ ವಾತವರಣ, ಉತ್ತಮ ಗುಣಮಟ್ಟದ ಆಹಾರ ಸೇವಿಸಲು ಸಿಗುತ್ತಿತ್ತು. ಈಗ ವಾತವರಣ ಕುಲಷಿತಗೊಳ್ಳುತ್ತಿರುವ ಜತೆಯಲ್ಲಿ ಬೆಳೆಗಳ ಬೆಳೆಯುವ ಪದ್ಧತಿಯೇ ಬದಲಾಗಿದೆ. ಇಂದಿನ ವಿಷ ಮಿಶ್ರಿತ ಆಹಾರದಿಂದ ರೋಗಗಳು ಕಾಡಲು ಆರಂಭಿಸುತ್ತಿದೆ. ಈ ನಿಟ್ಟಿನಲ್ಲಿ ದೇಹಕ್ಕೆ ಶಕ್ತಿ, ಕ್ಷಮತೆ ಬರಬೇಕಾದರೆ ನಿತ್ಯ ದೈಹಿಕ ಕಸರತ್ತುನಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ವಯಸ್ಸಿನ ಮಿತಿ ವಿಲ್ಲದೇ ತಮ್ಮ ವಯಸ್ಸಿಗೆ ಅನುಕೂಲವಾಗುವ ಕ್ರೀಡೆಯಲ್ಲಿ ಪ್ರತಿನಿತ್ಯ ತೊಡಗಿಸಿಕೊಳ್ಳಬೇಕು ಎಂದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀನಿವಾಸಯ್ಯ ಮಾತನಾಡಿದರು. ಇದೇ ಸಂಧರ್ಭದಲ್ಲಿ ತಮಿಳುನಾಡಿನ ಕೂಯಮತ್ತೂರುನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಅಯ್ಕೆಯಾಗಿರುವ ಶಿಕ್ಷಕ ನಾರಾಯಣಸ್ವಾಮಿ ರವರನ್ನು ಅಬಿನಂದಿಸಲಾಯಿತು. ಹಿರಿಯ ಕ್ರೀಡಾ ಪಟು ಆಂಜಿಗೌಡ, ಎಸ್.ಎಂ. ವೆಂಕಟೇಶ್, ಲಕ್ಷ್ಮಿಪತಿ, ಬಿ.ಜೆ. ನಾಗರಾಜ್ ಇದ್ದರು.