ಮೋದಿಯೊಂದಿಗೆ ವಿಡಿಯೋ ಕಾನ್ಫರೆನ್ಸ್
ಮುಳಬಾಗಲು: ರಾಷ್ಚ್ರದಲ್ಲಿಯೇ ಪ್ರಥಮ ಬಾರಿಗೆ ಕೋಲಾರ ಮೀಸಲು ಕ್ಷೇತ್ರದ ವ್ಯಾಪ್ತಿಯ ಎಸ್ಸಿ ಮೋರ್ಚ ಕಾರ್ಯಕರ್ತರಿಂದ ದಲಿತ್ ಫಾರ್ ಮೋದಿ ಕಾರ್ಯಕ್ರಮವನ್ನು ಮಾ.1ರಂದು ಕೋಲಾರದಲ್ಲಿ ಏರ್ಪಡಿಸಿದ್ದು, ನರೇಂದ್ರಮೋದಿಯವರನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತನಾಡುವ ಅವಕಾಶ ಕಲ್ಪಿಸಲಾಗಿದೆ.
ಕ್ಷೇತ್ರದ ಎಲ್ಲಾ ಎಸ್ಸಿಎಸ್ಟಿ ಬಂಧುಗಳ ಭಾಗವಹಿಸಿ ಸಂವಾದದಲ್ಲಿ ಮೋದಿಯವರೊಂದಿಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ರಾಜ್ಯ ಎಸ್ಸಿ ಮೋರ್ಚ ಸಂಚಾಲಕ ವಿಜಯಕುಮಾರ್ ಕೋರಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಬಿಜೆಪಿ ದಲಿತ ಮೋರ್ಚ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಿಂದ ದಲಿತರ ಉದ್ಧಾರ ಸಾಧ್ಯವಿಲ್ಲ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸತತವಾಗಿ 6 ಬಾರಿ ಕೋಲಾರ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶೂನ್ಯವಾಗಿದೆ, ಅವರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಈ ಬಾರಿ ಯಾವುದೇ ಬಿಜೆಪಿ ಅಭ್ಯರ್ಥಿ ಕೋಲಾರದಿಂದ ಸ್ಪರ್ಧೆಗಿಳಿದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಅಂತರದಲ್ಲಿ ಗೆಲವು ಸಾಧಿಸುವುದು ಖಚಿತವೆಂದರು.
ಮುಳಬಾಗಲು ವಿಧಾನ ಸಭೆ ಕ್ಷೇತ್ರದಲ್ಲಿ ಮುಳಬಾಗಲು ಬಿಜೆಪಿ ಅಭ್ಯರ್ಥಿಗೆ 45 ಸಾವಿರಕ್ಕೂ ಹೆಚ್ಚಿನ ಮತ ಲಭಿಸಲಿದೆ ಎಂದರು. ಕೆ.ಎಚ್. ಮುನಿಯಪ್ಪ ತಮ್ಮ ಸೋಲಿನ ಕುರಿತು ಅರಿತಿರುವ ಕಾರಣ ಕೋಲಾರದ ಪತ್ರಕರ್ತರ ಸಂಘದಲ್ಲಿ ಕೆಲವು ಸಂಘಟನೆಗಳನ್ನು ಉಪಯೋಗಿಸಿಕೊಂಡು ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆಂದು ಆರೋಪಿಸಿದರು. ಕೋಲಾರ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ರಾಮಸಂದ್ರ ನಾಗರಾಜ್ ಮಾತನಾಡಿದರು. ತಿಮ್ಮರಾಯಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಅತ್ತಿಹಳ್ಳಿ ವೆಂಕಟರವಣಪ್ಪ,ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಹರೀಶ್, ವಕೀಲ ಜಯಪ್ಪ, ಎಂ. ಶಂಕರಪ್ಪ, ಉತ್ತನೂರು ಕೆ. ರಮಾದೇವಿ ರಾಜಗೋಪಾಲ್, ಮಹಿಳಾ ಮೋರ್ಚ ನಿರ್ಮಲಮ್ಮ, ಮಾತನಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೂವಳ್ಳಿ ನಾಗರಾಜ್, ಸುಭದ್ರಮ್ಮ, ಅಂಬರೀಶ್, ನಾಗರಾಇದ್ದರು.
ಮುನಿಯಪ್ಪರ ಸಾಧನೆ ಶೂನ್ಯ
ಕೆಜಿಎಫ್: ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಕೋಲಾರ ಜಿಲ್ಲೆಯ ಅಭಿವೃದ್ಧಿಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ರಾಜಶೇಖರ್ಮೂರ್ತಿ ಹೇಳಿದರು.
ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಡಿವೈಎಫ್ಐ ವತಿಯಿಂದ ನಗರದಲ್ಲಿ ಆಯೋಜಿಸಿದ್ದ 11ನೇ ಕೋಲಾರ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿ, ಕೆಜಿಎಫ್ ಚಿನ್ನದ ಗಣಿ ಮುಚ್ಚಿ ಇಲ್ಲಿನ ಕಾರ್ಮಿಕರು ಪರದಾಡುವ ಪರಿಸ್ಥಿತಿ ಉಂಟಾಗಿದ್ದು 20 ಸಾವಿರ ಕಾರ್ಮಿಕರ ಕುಟುಂಬಗಳು ಉದ್ಯೋಗ ಹುಡಿಕಿಕೊಂಡು ಪ್ರತಿದಿನ ಪ್ರಯಾಣ ಮಾಡುತ್ತಿರುವ ಹಿನ್ನಲೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕ ಘಟಕಗಳನ್ನು ಸ್ಥಾಪನೆ ಮಾಡಲು ಮೂರು ಬಾರಿ ಕೇಂದ್ರ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಅವರಿಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಪಿ. ತಂಗರಾಜ್ ಮಾತನಾಡಿ, ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು, ಬಿಜಿಎಂಎಲ್ ಚಿನ್ನದ ಗಣಿ ಪ್ರದೇಶದಲ್ಲಿ ವಾಸಿಸುವ ಕಾರ್ಮಿಕರಿಗೆ ಮನೆಗಳನ್ನು ಸ್ವಂತ ಮಾಡಬೇಕು, ಜಿಲ್ಲೆಯಯಲ್ಲಿ ಹೆಚ್ಚು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಬೇಕು, ಉದ್ಯೋಗ ನೇಮಕಾತಿ ವೇಳೆ ಯಾವುದೇ ಶುಲ್ಕ ಪಡೆಯಬಾರದು ಎಂದು ಒತ್ತಾಯಿಸಿದರು.