ರು. 10 ಕೋಟಿ ವೆಚ್ಚದ ಆಸ್ಪತ್ರೆ ಕಾಮಗಾರಿಗೆ ಶಂಕು ಸ್ಥಾಪನೆ
ಚಿಂತಾಮಣಿ: ಎಲ್ಲಾ ಬಡವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರೋಗ್ಯ ಭಾಗ್ಯ ಕಲ್ಪಿಸಲು ವಿವಿಧ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಅಸ್ಪತ್ರೆಯ 10 ಕೋಟಿ ರು. ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಬಡಜನರು ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಹೋಗುವ ಸಮಸ್ಯೆ ತಪ್ಪಿಸಲು ಸರ್ಕಾರ ತಾಯಿ ಮತ್ತು ಮಕ್ಕಳ ಅರೋಗ್ಯದ ಹಿತದೃಷ್ಟಿಯಿಂದ ನಗರದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ 10 ಕೋಟಿ ರು. ವೆಚ್ಚದಲ್ಲಿ ಶಂಕು ಸ್ಥಾಪನೆ ಸಹಕರಿಸಿದ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತವನ್ನು ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಮಾತನಾಡಿ, ದೇಶದಲ್ಲಿ ಕಾಡುತ್ತಿರುವ ಅಸ್ಪೃಶ್ಯತೆ, ಬಡತನ ನಿರ್ಮೂಲನೆ ಆಗಬೇಕಾದರೆ ಬಡಜನರಿಗೂ ಆರೋಗ್ಯ ಭಾಗ್ಯ ಕಲ್ಪಿಸಿದ್ದಲ್ಲಿ ಸಮಾಜ ಸುಧಾರಣೆ ಸಾಧ್ಯ ಎಂದರು.
ಚುನಾವಣೆ ಸಮೀಪಿಸುತ್ತಿರುವುದರಿಂದ ತುರ್ತಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತರಾತುರಿಯಲ್ಲಿ ಸಭೆ ಮುಗಿಸುವ ಮುನ್ನವೇ ವೇದಿಕೆ ಮೇಲಿದ್ದ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಮುಮ್ತಾಜ್ ಅಲಿಖಾನ್, ಜಿಪಂ ಅಧ್ಯಕ್ಷ ಚಿನ್ನಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಉಪ ವಿಭಾಗಾಧಿಕಾರಿ ಶಾಂತಲಾ ಸೇರಿದಂತೆ ಇನ್ನೂ ಹಲವು ಅಧಿಕಾರಿಗಳು ವೇದಿಕೆಯಿಂದ ಕೆಳಗಿಳಿದರು. ಇದರಿಂದ ಶಾಸಕರ ಭಾಷಣ ಅರ್ಧಕ್ಕೆ ನಿಲ್ಲಿಸಿ ಮುಂದಿನ ಕಾರ್ಯಕ್ರಮಗಳತ್ತ ಭಾಗವಹಿಸಲು ತೆರಳಲು ಮುಂದಾದಾಗ ಸಭೆಗೆ ಆಗಮಿಸಿದ ಸಾರ್ವಜನಿಕರಿಗೆ ಜಿಲ್ಲಾ ಆಡಳಿತದ ಬಗ್ಗೆ ಅಸಮದಾನ ಉಂಟಾಯಿತು. ತಾಲೂಕು ದಂಡಾಧಿಕಾರಿ ಕೆ.ಟಿ. ಕೃಷ್ಣಸ್ವಾಮಿ, ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಜಿಪಂ ಸದಸ್ಯ ವೀಣಾಗಂಗುಲಪ್ಪ, ಡಾ. ಜಯಂತಿ, ಗೋಪಾಲಕೃಷ್ಣ, ನಗರಸಭಾ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ ಇದ್ದರು.