ವಿದ್ಯಾರ್ಥಿಗಳು ಸೃಜನಶೀಲರಾಗಿ: ಗಾಂಧಿ ಸಲಹೆ
ಕೋಲಾರ: ವಿದ್ಯಾರ್ಥಿಗಳು ಸೃಜನಶೀಲರಾಗದಿದ್ದರೆ ಸ್ವಂತಿಕೆಯಿಂದ ಪ್ರಗತಿ ಸಾಧಿಸಲು ಕಷ್ಟವಾಗುತ್ತದೆ ಎಂದು ಅಮೆರಿಕಾದ ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಜ್ಞಾನಿ ಕನ್ನಡಿಗರೇ ಆದ ಕಂಚಿ.ಕೆ. ಗಾಂಧಿ ಕಿವಿಮಾತು ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಅವರು ಕೋಲಾರ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಬಹುತೇಕ ವಿದ್ಯಾರ್ಥಿಗಳು ಸ್ಮರಣ ಶಕ್ತಿಯನ್ನು ಆಧರಿಸಿ ಶಿಕ್ಷಣ ಪಡೆಯುವಂತಾಗಿದೆ, ಇದರಿಂದ ಕ್ರಿಯಾ ಶೀಲತೆ ಮತ್ತು ಸೃಜನ ಶೀಲತೆಗೆ ಹಿನ್ನಡೆ ಉಂಟಾಗುತ್ತಿದೆ ಎಂದು ಅಭಿಪ್ರಾಯಿಸಿದರು.
ಯಾವುದೇ ಒಬ್ಬ ವ್ಯಕ್ತಿ ಶ್ರದ್ಧೆ, ಸ್ಪಷ್ಟವಾದ ಗುರಿ ಹಾಗೂ ನಿಖರತೆಯನ್ನು ಹೊಂದಿದ್ದಲ್ಲಿ ಗುರಿ ತಲುಪಲು ಸುಲಭವಾಗುತ್ತದೆ, ಸೃಜನಶೀಲತೆಯುಳ್ಳವರು ದೇಶಕ್ಕಾಗಿ,ಸಮಾಜಕ್ಕಾಗಿ ನಿರಂತರವಾಗಿ ಕೆಲಸ ಮಾಡಬಲ್ಲರು, ಈ ಶಕ್ತಿ ನಮ್ಮ ದೇಶದ ಯುವಕರಲ್ಲಿ ಇದೆ. ಆದರೆ, ಸರಿಯಾದ ಮಾರ್ಗದರ್ಶನ ಅಗತ್ಯವೆಂದು ಪ್ರತಿಪಾದಿಸಿದರು.
ಯಾವುದೇ ಒಬ್ಬ ವ್ಯಕ್ತಿ ಸಂಶೋಧನಾ ಕ್ಷೇತ್ರದಲ್ಲಿ ತನ್ನ ನೈಜತನವನ್ನು ಸಾಭೀತು ಮಾಡಬೇಕಾದರೆ ಸ್ವಂತಿಕೆ ಬಹಳ ಮುಖ್ಯ. ಸಂಶೋಧನೆಗಳು ನಕಲಿಯಾದರೆ ಸ್ವಂತಿಕೆ ಇಲ್ಲದಂತಾಗುತ್ತದೆ ಹಾಗೂ ಗುರಿ ತಲುಪಲಾಗದು ಎಂದರು.
ವಿವಿಧ ಶಾಲಾ-ಕಾಲೇಜುಗಳಿಂದ ಬಂದಿದ್ದ ಶಿಕ್ಷಕರು ಕಂಚೆ.ಕೆ. ಗಾಂಧಿ ಅವರೊಂದಿಗೆ ಶೈಕ್ಷಣಿಕ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಅಮೆರಿಕಾ ದೇಶದಲ್ಲಿ ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರಕ್ಕೆ ನೀಡುವ ಉತ್ತೇಜನದ ಬಗ್ಗೆ ವಿವರಿಸಿದರಲ್ಲದೆ, ಅಲ್ಲಿ ನೆಲಸಿರುವ ಭಾರತೀಯರ ಸಾಧನೆ, ಜ್ಞಾನವನ್ನು ಅಮೆರಿಕಾ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ. ಇದೇ ರೀತಿ ನಮ್ಮ ದೇಶದಲ್ಲೂ ಆದಾಗ ಮಾತ್ರ ವಿಜ್ಞಾನ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಸಾಧಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಲೇಖಕ, ಪತ್ರಕರ್ತ ವಿಶ್ವಕುಂದಾಪುರ ಅವರು ಭಾರತದಲ್ಲಿ ವಿಜ್ಞಾನ ಕ್ಷೇತ್ರ ಸಾಕಷ್ಟು ಬೆಳೆಯುತ್ತಿದೆಯಾದರೂ ವೈಜ್ಞಾನಿಕ ಮನೋಭಾವನೆ ನಿರೀಕ್ಷೆಯಷ್ಟು ಫಲಶೃತಿ ಕಾಣುತ್ತಿಲ್ಲ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಹೆಚ್ಚಾಗಬೇಕಾದರೆ ಸಂಶೋಧಕರು ಮತ್ತು ಕಂಚಿ ಅವರಂತಹ ವಿಜ್ಞಾನಿಗಳ ಮಾರ್ಗದರ್ಶನ ಸದ್ಬಳಕೆ ಆಗಬೇಕಾಗಿದೆ ಎಂದರು.
ಕಾರ್ಯಕ್ರಮದ ಉದ್ದೇಶ ಹಾಗೂ ಕಂಚಿ.ಕೆ. ಗಾಂಧಿಯವರ ವಿಚಾರಧಾರೆಗಳ ಬಗ್ಗೆ ವೇಮಗಲಲ್ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಎಸ್. ಮುರಳಿಧರ್ ತಿಳಿಸಿದರು. ಮಾಲೂರು ಕಾಲೇಜಿನ ಸಹ ಪ್ರಾಧ್ಯಾಪಕ ಮುನಿನಾರಾಯಣ, ಮಹಿಳಾ ಕಾಲೇಜಿನ ಆಡಳಿತಾಧಿಕಾರಿ ಕಾಮಾಕ್ಷಿ, ವಿಜಯ ಇದ್ದರು.