ಸಾಮೂಹಿಕ ವಿವಾಹಗಳು ಸಮಾಜಕ್ಕೆ ಮಾದರಿಯಾಗಲಿ
ಚಿಂತಾಮಣಿ: ಜಾತಿಭೇದವಿಲ್ಲದೆ ಸಾಮೂಹಿಕ ವಿವಾಹಗಳು ಸಮಾಜಕ್ಕೆ ಮಾದರಿಯಾಗಲಿ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ತಾಲೂಕಿನ ಪುರಾಣ ಪ್ರಸಿದ್ಧ ಭಾರದ್ವಾಜ ಕ್ಷೇತ್ರ ಮುರುಗಮಲೆ ಕ್ರಾಸ್ನಲ್ಲಿರುವ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಸೇವಾ ಸಮಿತಿ ವತಿಯಿಂದ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜ ಸೇವಕ ಎಸ್.ವಿ. ನರೇಶ್ ಕುಮಾರ್ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರಮೇಶ್ ಕುಮಾರ್ ಮಾತನಾಡಿ, ಕುಟುಂಬದಲ್ಲಿ ಸಣ್ಣ-ಪುಟ್ಟ ವಿಷಯಗಳಿಗೆ ಜಗಳವಾಡದೆ ಗಂಡ-ಹೆಂಡತಿ ಇಬ್ಬರು ಸಮಾನವೇ ಎಂದು ಭಾವಿಸಿ ಸುಖ ಸಂಸಾರ ನಡೆಸಲು ಇಬ್ಬರೂ ಕೈ ಜೋಡಿಸಿದರೆ ಮಾತ್ರ ಸಂಸಾರ ನಡೆಸಲು ಸಾಧ್ಯವೆಂದು ಹಿತ ನುಡಿಗಳನ್ನು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಸಮಾಜ ಸೇವಕ ಎಸ್.ವಿ. ರಮೇಶ್ ಕುಮಾರ್ ನೂತನ ವಧು-ವರರಿಗೆ ಮಾಂಗಲ್ಯ, ವಸ್ತ್ರ, ಕುಟುಂಬಕ್ಕಾಗಿ ಪಾತ್ರೆಗಳನ್ನು ವಿತರಿಸಿದರು. ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಮದಕರಿ ನಾಯಕ ಸೇನೆ ರಾಜ್ಯಾಧ್ಯಕ್ಷ ಸಿಂಗಪೂರ್ ವೆಂಕಟೇಶ್, ವಾಣಿ ಕೃಷ್ಣಾರೆಡ್ಡಿ, ಪಟೇಲ್ ಅಶ್ವಥನಾರಾಯಣರೆಡ್ಡಿ, ಸಿ.ಎನ್. ನರಸಿಂಹರೆಡ್ಡಿ, ರಾಯಲ್ರಾಮ ಕೃಷ್ಣಾರೆಡ್ಡಿ, ಷೇಕ್ ಮೌಲಾ ಇದ್ದರು.
ಸರಳ ವಿವಾಹವಾಗಲು ಸಲಹೆ
ಚಿಂತಾಮಣಿ: ಆಡಂಭರ ಮದುವೆಗಳಿಂದ ಜನರು ಸಾಲಕ್ಕೆ ಸಿಲುಕಿ ನೆಮ್ಮದಿಯಿಲ್ಲದೆ ಪರದಾಡುವುದಕ್ಕಿಂತ ಸರಳ ವಿವಾಹವಾಗುವುದು ಸೂಕ್ತವೆಂದು ಸಿರಾ ತಾಲೂಕಿನ ಶಿಡ್ಲೇಕೋಣ ಸುಕ್ಷೇತ್ರ ವಾಲ್ಮೀಕಿ ಮಹಾ ಸಂಸ್ಥಾನ ಪೀಠಾಧ್ಯಕ್ಷರಾದ ವಾಲ್ಮೀಕಿ ಸಂಜಯಕುಮಾರ ಸ್ವಾಮೀಜಿ ಹೇಳಿದರು.
ತಾಲೂಕಿನ ಪುರಾಣ ಪ್ರಸಿದ್ಧ ಭಾರದ್ವಾಜ ಕ್ಷೇತ್ರ ಮುರುಗಮಲೆ ಕ್ರಾಸ್ನಲ್ಲಿರುವ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೆರೆದಿದ್ದ ನೂತನ ವಧು-ವರರನ್ನು ಆಶೀರ್ವದಿಸಿ ಉಪನ್ಯಾಸ ನೀಡಿದರು.
ಮಳೆ ಬೆಳೆ ಇಲ್ಲದೆ ಸಂಕಷ್ಟದಲ್ಲಿರುವಾಗ ಜನರು ಆಡಂಭರ ಮದುವೆಗಳಿಂದ ದೂರ ಸರಿದು, ತಮ್ಮ ನೆಮ್ಮದಿ ಜೀವನಕ್ಕೆ ಸರಳ ವಿವಾಹಗಳು ಸೂಕ್ತವೆಂದು ಹೇಳಿದರು.
ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ 75 ಕ್ಕೂ ಹೆಚ್ಚು ನೂತನ ವಧು-ವರರಿಗೆ ಕಂಕಣ ಭಾಗ್ಯ ವಸ್ತ್ರಗಳು ಮತ್ತು ಮಾಂಗಲ್ಯ ಧಾರಣೆ ನೀಡಿ ಆಶೀರ್ವಾದ ನೀಡಿದರು.
ನಂತರ ಸಚಿವರು ಸಮಾಜ ಸೇವಕ ಎಸ್.ವಿ. ನರೇಶ್ ಕುಮಾರ್ ಮತ್ತು ಕುಟುಂಬದವರು ನಡೆಸುತ್ತಿರುವ ಉಚಿತ ಸಾಮೂಹಿಕ ವಿವಾಹಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.