ಅನುದಾನ ಬಳಕೆಯಲ್ಲಿ ಸಚಿವ ಮುನಿಯಪ್ಪ ಬೆಸ್ಟ್: ಜಿಲ್ಲಾಧಿಕಾರಿ ರವಿ
ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಸಂಸದ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ನವರು ತಮ್ಮ 5 ವರ್ಷಗಳ ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಕೆ ಮಾಡಿದ್ದಾರೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ತಿಳಿಸಿದರು.
ಈವರೆಗೂ ಕೇಂದ್ರದಿಂದ ಬಿಡುಗಡೆಯಾದ 11.5 ಕೋಟಿ ರು.ಗಳನ್ನು ಸಂಪೂರ್ಣವಾಗಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವೆಚ್ಚ ಮಾಡಲಾಗಿದೆ ಎಂದರು. ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ 5 ವರ್ಷಗಳ ಸಂಸದರ ಒಟ್ಟು 16 ಕೋಟಿ ಅನುದಾನದಲ್ಲಿ ಇದುವರೆಗೂ ಬಿಡುಗಡೆಯಾಗಿರುವ 11.5 ಕೋಟಿ ರು. ಸಂಪೂರ್ಣ ವೆಚ್ಚವಾಗಿದ್ದು, ಉಳಿದ 7.5 ಕೋಟಿ ರು. ಬಿಡುಗಡೆಯಾಗಬೇಕಾಗಿದೆ ಎಂದು ವಿವರಿಸಿದರು.
2012-13ನೇ ಸಾಲಿನ 2ನೇ ಹಂತದ 2.5 ಕೋಟಿ ಮತ್ತು 2013-14ನೇ ಸಾಲಿನ 5 ಕೋಟಿ ಸೇರಿದಂತೆ ಒಟ್ಟು 7.5 ಕೋಟಿ ಬಿಡುಗಡೆಯಾಗಬೇಕಾಗಿದೆ. ಈ ಪೈಕಿ 2.5 ಕೋಟಿ ರು. ಸೋಮವಾರ ಬಿಡುಗಡೆಯಾಗಿ ಹಣ ಜಮಾ ಆಗಿದೆ ಎಂದರು.
ಉಳಿದಿರುವ 7.5 ಕೋಟಿ ರು.ಗಳ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಿದ್ದು, ಅನುದಾನ ಬಂದ ಕೂಡಲೇ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದ ಅವರು, ಸಂಸದರ ನಿಧಿಯಿಂದ ಪ್ರಾರಂಭವಾಗಿರುವ ಸಿಮೆಂಟ್ ರಸ್ತೆ, ಒಳಚರಂಡಿ, ಸಮುದಾಯ ಭವನ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಹಮ್ಮಿಕೊಂಡಿರುವ ಕೆಲಗಳು ಶೇ.90 ರಷ್ಟು ಮುಗಿದಿದೆ ಎಂದು ತಿಳಿಸಿದರು.