ಗ್ರಾಮಗಳಲ್ಲಿ ನೈರ್ಮಲ್ಯ ಬಗ್ಗೆ ಅರಿವು ಮೂಡಿಸಿ: ದೇವರಾಜ್
ಚಿಂತಾಮಣಿ: ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವ ಕುರಿತು ಅಲ್ಲಿನ ಜನರಿಗೆ ವಿದ್ಯಾರ್ಥಿಗಳು ಅರಿವು ಮೂಡಿಸಿದಲ್ಲಿ ಪರಿಸರ ಕಾಪಾಡಲು ಸಾಧ್ಯ ಎಂದು ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಜಂಗಮಶೀಗಹಳ್ಳಿ ದೇವರಾಜ್ ಕರೆ ನೀಡಿದರು.
ತಾಲೂಕಿನ ಕೈವಾರ ತಪೋಭವನ ಬಳಿ ಇರುವ ಋಷಿ ವಿಜ್ಞಾನ ವಿಕಾಸ ಕೇಂದ್ರದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆಕ್ಸ್ಫರ್ಡ್ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರದ 1 ವಾರದ ಶಿಬಿರದ ಕಾರ್ಯಕ್ರಮದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಗರ ಪ್ರದೇಶದಲ್ಲಿನ ವಿದ್ಯಾರ್ಥಿಗಳು ಕಾಲೇಜು ವತಿಯಿಂದ ನಡೆಯುವ ಶಿಬಿರಕ್ಕೆ ಅರ್ಹತಾ ಪತ್ರಕ್ಕೆ ಮಾತ್ರ ಕೆಲಸ ಮಾಡುವುದನ್ನು ಬಿಟ್ಟು, ಹಳ್ಳಿ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಮತ್ತು ನೈರ್ಮಲ್ಯ ಕಾಪಾಡಲು ಗ್ರಾಮೀಣ ಜನತೆಗೆ ಅರಿವು ಮೂಡಿಸಿದಲ್ಲಿ ಪರಿಸರ ಕಾಪಾಡಲು ಸಹಕಾರವಾಗಲಿದೆ ಎಂದು ಹೇಳಿದರು.
ನಂತರ ಕೈವಾರ ಯೋಗಿನಾರೇಯಣ ಮಠದ ವ್ಯವಸ್ಥಾಪಕ ಲಕ್ಷ್ಮಿನಾರಾಯಣ್ ಮಾತನಾಡಿ, ಪುಣ್ಯಭೂಮಿ ಕೈವಾರ ತಾತಯ್ಯನವರ ಕಾಲಜ್ಞಾನದ ಬಗ್ಗೆ ಇಂದಿನ ಯುವಪೀಳಿಗೆ ತಿಳಿದುಕೊಂಡು ಆದರ್ಶ ವ್ಯಕ್ತಿಗಳಾಗಬೇಕು ಎಂದ ಅವರು, ವಿದೇಶಿ ವ್ಯಾಮೋಹಕ್ಕೆ ಯುವಕ ಯುವತಿಯರು ಒಳಗಾಗದೆ ಸ್ವದೇಶಿ ಸಂಪ್ರದಾಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸಬೇಕೆಂದು ಹೇಳಿದರು.
ಪತ್ರಕರ್ತ ಎನ್.ಬಾಬು ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಂಡು ಪರಿಸರ ಉಳಿವಿಗೆ ಶ್ರಮ ವಹಿಸಬೇಕೆಂದು ನುಡಿದರು.
ಸಹಾಯಕ ಸಬ್ಇನ್ಸ್ಪೆಕ್ಟರ್ ಬಚ್ಚಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಂಶುಪಾಲರಾದ ಕೆ.ಅಪರ್ಣರಾವ್, ಋಷಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ನಾಗರಾಜ್, ಜನಪದ ಕಲಾವಿದ ಶ್ಯಾಮರಾಜ್ ಸೇರಿದಂತೆ ತರಬೇತಿಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.