ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ'

Rashmi Kasaragodu
Updated On : 26 Feb 2014, 1:33 am

ಚಿಕ್ಕಬಳ್ಳಾಪುರ: ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದರೆ ಲೋಕಾಯುಕ್ತರಿಗೆ ಕೆಲಸ ಕಡಿಮೆಯಾಗುತ್ತದೆ ಎಂದು ಲೋಕಾಯುಕ್ತ ಎಸ್ಪಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಅಹವಾಲು ಸ್ವೀಕಾರ ಸಭೆಯಲ್ಲಿ ದೂರು ಸ್ವೀಕರಿಸಿ ಮಾತನಾಡಿ, ಸರ್ಕಾರದಿಂದ ಜನರಿಗೆ ಸವಲತ್ತುಗಳನ್ನು ಒದಗಿಸಲು ವಿವಿಧ ಇಲಾಖೆಗಳಿಗೆ ಕಾಲ ಕಾಲಕ್ಕೆ ಅಗತ್ಯವಿರುವ ಅನುದಾನ ನೀಡಲಾಗುತ್ತಿದೆ. ಇದನ್ನು ಪ್ರಾಮಾಣಿಕವಾಗಿ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸಬೇಕು. ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಪ್ರಗತಿ ಸಾಧಿಸಬೇಕು. ಆಗ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ. ಆದರೆ, ಬಹುತೇಕ ಅಧಿಕಾರಿಗಳು ಬೇರೆ ಬೇರೆ ಕಾರಣಗಳಿಗಾಗಿ ಜನರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ವಿಳಂಬ ಧೋರಣೆ  ಅನುಸರಿಸುವುದರಿಂದ ಲೋಕಾಯುಕ್ತಗೆ ದೂರುಗಳು ಮಹಾಪೂರ ಹರಿದು ಬರುತ್ತದೆ ಎಂದರು.
ಜನರು ಕಾನೂನು ಬದ್ಧವಾಗಿ ತಮಗೆ ದೊರೆಯಬೇಕಾದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಒಂದು ವೇಳೆ ಅಧಿಕಾರಿಗಳು ಬೇಕಂತಲೇ ವಿಳಂಬ ಧೋರಣೆಯಲ್ಲಿ ವರ್ತಿಸುತ್ತ ಸತಾಯಿಸಿದಾಗ ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ಮೊದಲು ದೂರು ಕೊಡಬೇಕು. ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕೇ ಹೊರತು ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.
ಜಿಲ್ಲಾ ಲೋಕಾಯುಕ್ತದಿಂದ ತಾಲೂಕು ಕೇಂದ್ರಗಳಲ್ಲಿ ಅಹವಾಲು ಸ್ವೀಕಾರ ಸಭೆಗಳನ್ನು ಪ್ರತಿ ತಿಂಗಳು ನಡೆಸಿ ಜನರ ಸಮಸ್ಯೆಗಳನ್ನು ತಿಳಿದುಕೊಳ್ಳಲಾಗುತ್ತಿದೆ. ಅದೇ ರೀತಿ ಸಭೆಯಲ್ಲಿ ಸ್ವೀಕೃತಗೊಂಡ ದೂರಿನ ಬಗ್ಗೆ ವಿಚಾರಣೆ ನಡೆಸಿ ವಿಲೇವಾರಿಯಾಗಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಮತ್ತು ಅಧಿಕಾರಿಗಳು ತಮ್ಮ ವಿರುದ್ಧ ದೂರು ಕೇಳಿ ಬಾರದಂತೆ ತ್ವರಿತಗತಿಯಲ್ಲಿ ಕೆಲಸ ಮಾಡಲು ಮುಂದಾಗುತ್ತಿರುವುದು ಕಂಡು ಬರುತ್ತಿದ್ದು ಲೋಕಾಯುಕ್ತರಿಗೆ ಒತ್ತಡವಿಲ್ಲದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಏಪ್ರಿಲ್ ತಿಂಗಳಿಂದ ಹೊಸ ಆರ್ಥಿಕ ವರ್ಷ ಶುರುವಾಗುವುದರಿಂದ ಅಧಿಕಾರಿಗಳು ಮಾರ್ಚ್ ತಿಂಗಳೊಳಗೆ ಫಲಾನುಭವಿಗಳಿಗೆ ನೀಡಬೇಕಾದ ಹಣ ಅಥವಾ ಚೆಕ್ಗಳನ್ನು ಪಾವತಿಸಬೇಕು. ತಮ್ಮ ಬಳಿಯೇ ಹಣವನ್ನು ಉಳಿಸಿಕೊಂಡು ಮತ್ತೆ ಸರ್ಕಾರಕ್ಕೆ ಹಣ ವಾಪಸ್ ಕಳುಹಿಸಿ ಫಲಾನುಭವಿಗಳು ತೊಂದರೆ ಅನುಭವಿಸುವಂತೆ ಮಾಡಬಾರದೆಂದರು.
ಅಶ್ರಯ, ಅಂಬೇಡ್ಕರ್ ಯೋಜನೆ, ಕೆರೆಗಳ ಒತ್ತುವರಿ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿ ದೂರುಗಳನ್ನು ಸಾರ್ವಜನಿಕರು ಸಲ್ಲಿಸಿದರು. ಸಭೆಯಲ್ಲಿ ತಹಸೀಲ್ದಾರ್ ನಟೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಗಿರಿಜಾ ಶಂಕರ್ ಇದ್ದರು.


ಉನ್ನತಿ ಮಾನವ ಹಕ್ಕುಗಳ ಸಂಘಕ್ಕೆ ಜಿಲ್ಲಾ ಉತ್ತಮ ಯುವ ಸಂಘ ಪ್ರಶಸ್ತಿ
ಗುಡಿಬಂಡೆ: ಕೋಲಾರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ನೆಹರು ಯುವಕೇಂದ್ರ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ನೀತಿ ಹಾಗೂ ರಾಜೀವ್ ಖೇಲ್ ಅಭಿಯಾನ್ ಕಾರ್ಯಕ್ರಮವನ್ನು 2012-13ನೇ ಸಾಲಿನಲ್ಲಿ ಯಶಸ್ವಿಯಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಗುಡಿಬಂಡೆಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘಕ್ಕೆ ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ಲಭಿಸಿದೆ. ಸಂಸ್ಥಾಪಕ ಅಧ್ಯಕ್ಷ ಜಿ.ವಿ. ವಿಶ್ವನಾಥ್ಗೆ ಪ್ರಶಸ್ತಿ ನೀಡಿ, ನಂತರ ಸಚಿವ ಕೆ.ಎಚ್. ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್, ಕೋಲಾರದ ಜಿಲ್ಲಾಧಿಕಾರಿ ಡಿ.ಕೆ. ರವಿ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಮೊದಲಾದ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement