ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮರೀಚಿಕೆಯಾದ ಕಲ್ಯಾಣಿಗಳ ಪುನಶ್ಚೇತನ

Rashmi Kasaragodu
Updated On : 26 Feb 2014, 1:32 am

ಕೆ. ರಮೇಶ್
ಬಂಗಾರಪೇಟೆ: ಕೆರೆಗಳ ತವರೂರೆಂದು ಖ್ಯಾತಿ ಹೊಂದಿರುವ ತಾಲೂಕು ಈಗ ಕೆರಗಳ ಅಸ್ಥಿತ್ವಕ್ಕಾಗಿ ಸೆಣಸುತ್ತಿದೆ, ಇದರ ಬೆನ್ನಲ್ಲೇ ಕಲ್ಯಾಣಿಗಳು ಅಸ್ತಿತ್ವ ಕಳೆದುಕೊಂಡು ಹುಡುಕಿದರೂ ಪತ್ತೆಯಾಗದ ಸ್ಥಿತಿ ನಿರ್ಮಾಣವಾಗಿದೆ.
ರಾಜಮಹಾರಾಜರ ಆಳ್ವಿಕೆ ವೇಳೆ ಬಂಗಾರಪೇಟೆ ಒಡಲಲ್ಲಿ ನಿರ್ಮಿಸಿದ್ದ ಕಲ್ಯಾಣಿಗಳನ್ನು ಸ್ಮಾರಕಗಳಾಗಿ ಉಳಿಸಿಕೊಳ್ಳುವ ಪ್ರಯತ್ನವೂ ನಡೆದಿಲ್ಲ. ಪರಿಣಾಮ ಮುಂದಿನ ಪೀಳಿಗೆಗೆ ಕಲ್ಯಾಣಿಯ ಕಲ್ಪನೆಯೆ ಸಿಗುವುದಿಲ್ಲವೇನೋ ಎಂಬ ಅನುಮಾನ ಆರಂಭವಾಗಿದೆ.
ಮನುಷ್ಯನ ದುರಾಸೆಯಿಂದಾಗಿ ಕೆರೆಗಳು ಬತ್ತಿದವು, ಕೆರೆಗಳು ಬತ್ತಿದ ಕಾರಣ ಅವುಗಳ ಆಶ್ರಯದಿಂದಲೇ ನಿರ್ಮಾಣಗೊಂಡಿದ್ದ ಕಲ್ಯಾಣಿಗಳು ಒಣಗಿದವು. ಅವು ಒಣಗಿದ ಕೂಡಲೆ ಬೇರೆ ರೂಪದಲ್ಲಿ ಕ್ಷೇತ್ರ ಬೆಳವಣಿಗೆಗೆ ಬಳಸಿಕೊಳ್ಳಬಹುದಿತ್ತು. ದುರಂತವೆಂದರೆ ಅಂತಹ ಯಾವ ಪ್ರಯತ್ನಗಳು ನಡೆಯಲಿಲ್ಲ. ಇದರಿಂದ ನೂರಾರು ವರ್ಷಗಳಿಂದ ಕುಡಿಯುವ ನೀರು ಪೂರೈಸಿದ ಕಲ್ಯಾಣಿಗಳ ಒಡಲಲ್ಲಿ ಕಸದ ರಾಶಿ ತುಂಬಿದೆ.
ಕಲ್ಯಾಣಿಗಳು ತೆರೆ ಮೆರೆಗೆ ಸರೆಯುತ್ತಿದ್ದಂತೆ ಅದರ ಒತ್ತುವರಿ ಅಂಜಿಕೆ ಇಲ್ಲದೆ ನಿರಂತರವಾಗಿ ಸಾಗಿದೆ. ಕಲ್ಯಾಣಿ ಇದ್ದ ಜಾಗದಲ್ಲಿ ಈಗ ಕಟ್ಟಡಗಳು ನಿರ್ಮಾಣವಾಗಿರುವುದರಿಂದ ಹಿಂದಿನ ಪೀಳಿಗೆಯ ಕೆಲವರ ನೆನಪಿನ ಪುಟದಲ್ಲಿ ಮಾತ್ರ ಇವು ಉಳಿದಿದೆ. ಕಲ್ಯಾಣಿಗಳ ಇತಿಹಾಸ ದಾಖಲಿಸುವ ಕೆಲಸ ನಡೆದಿಲ್ಲ.ಪಟ್ಟಣದಲ್ಲಿ ಯಾವ ದೇವಾಲಯದ ಮುಂದೆಯೂ ಇಂದು ಕಲ್ಯಾಣ ನೋಡಲೂ ಸಾಧ್ಯವಿಲ್ಲ ಎಲ್ಲವನ್ನೂ ಮುಚ್ಚಲಾಗಿದೆ.
ಗ್ರಾಮೀಣ ಭಾಗದ ಕೆಲವು ಪುರಾತನ ದೇವಾಲಯಗಳ ಮುಂದೆ ಇಂದಿಗೂ ಇದೆಯಾದರೂ ಅವು ಕಸದ ರಾಶಿಯಿಂದ ಮುಚ್ಚಿ ಹೋಗಿದೆ. ಹಿಂದೆ ಕಲ್ಯಾಣಿಗಳೇ ನೀರಿನ ಪ್ರಮುಖ ಮೂಲಗಳಾಗಿದ್ದವು, ಬಹುತೇಕ ಕಲ್ಯಾಣಿಗಳಿಂದ ಜನರು ಕುಡಿಯುವ ನೀರು ಪಡೆಯುತ್ತಿದ್ದರು, ಸದಾ ಕಾಲ ಕಲ್ಯಾಣಿಗಳಲ್ಲಿ ಶುದ್ಧ ನೀರು ಲಭ್ಯವಾಗಿರುತ್ತಿತ್ತು, ಅಲ್ಪ ಪ್ರಮಾಣದಲ್ಲಿ ಮಳೆ ಬಂದರೂ ಕಲ್ಯಾಣಿಗಳಲ್ಲಿ ನೀರು ತುಂಬುತಿತ್ತು. ಇದರಿಂದ ಪಟ್ಟಣದ ಜನರ ನೀರಿನ ದಾಹ ತೀರಿಸಲು,ದೇವಾಲಯಗಳಲ್ಲಿ ಪೂಜಾ ಕಾರ್ಯಗಳಿಗೆ ಈ ನೀರು ಬಳಕೆ ಆಗುತ್ತಿತ್ತು. ಈ ಕಾರಣದಿಂದ ಕಲ್ಯಾಣಿಗಳು ಸಮಾಜದ ಒಂದು ಮುಖ್ಯವಾದ ಭಾಗವಾಗಿ ಅಸ್ತಿತ್ವ ಪಡೆದಿದ್ದವು.
ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ.ವಿಶ್ವನಾಥ್ ಅವರು ಕಲ್ಯಾಣಿಗಳನ್ನು ಸಂರಕ್ಷಣೆ ಮಾಡುವ ಅಭಿಯಾನ ಆರಂಭಿಸಸಿದ್ದರು,ಅವರ ಅಂದುಕೊಂಡಿದ್ದ ಕೆಲಸ ಪೂರ್ಣಗೊಳಿಸುವ ಮೊದಲೇ ಜಿಲ್ಲೆಯಿಂದ ವರ್ಗಾವಣೆಗೊಂಡರು, ನಂತರ ಕಲ್ಯಾಣಿಗಳ ರಕ್ಷಣೆ ನೆನೆಗುದಿಗೆ ಬಿದ್ದಿದೆ. ಸರ್ಕಾಗಳ ನಿರ್ಲಕ್ಷ್ಯತೆಯಿಂದ ಹಾಗೂ ನೆಲಗಳ್ಳರ ದುರಾಸೆಯಿಂದ ಮುಚ್ಚಿ ಹೋಗಿರುವ ಕಲ್ಯಾಣಿಗಳಿಗೆ ಮತ್ತೆ ಜೀವ ತುಂಬುವ ಕೆಲಸ ಆಗಬೇಕಿದೆ ಎಂದು ಪ್ರಜ್ಞಾವಂತ ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement