ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೊಳವೆಬಾವಿ, ಬೀದಿ ದೀಪಕ್ಕೆ ಒತ್ತಾಯ

Rashmi Kasaragodu
Updated On : 27 Feb 2014, 1:38 am

ಕೋಲಾರ: ಇಲ್ಲಿನ ನಗರಸಭೆಯ ಸುಮಾರು 20ಕ್ಕೂ ಹೆಚ್ಚು ಸದಸ್ಯರೊಂದಿಗೆ ಪೌರಾಯುಕ್ತ ಜಗದೀಶ್ ಹಾಗೂ ಅಧಿಕಾರಿ ವರ್ಗದವರು ಬುಧವಾರ ವಿಶೇಷ ಸಮಾಲೋಚನಾ ಸಭೆ ನಡೆಸಿ ಸದಸ್ಯರ ಅಹವಾಲು ಅಲಿಸಿದರು.
ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು 12 ಮಂದಿ ಮಹಿಳಾ ಸದಸ್ಯರಲ್ಲಿ ಯಾರೊಬ್ಬರು ಸಹ ವಿಶೇಷ ಸಭೆಯಲ್ಲಿ ಹಾಜರಿರಲಿಲ್ಲ. ಇವರ ಬದಲಿಗೆ ಪತಿರಾಯರು ಹಾಜರಾಗಿ ಪತ್ನಿಯರು ಪ್ರತಿನಿಧಿಸುತ್ತಿರುವ ವಾರ್ಡುಗಳ ಮೂಲ ಸಮಸ್ಯಗಳ ಕಡೆ ಬೆಳಕು ಚೆಲ್ಲಿದರು.
ನೀರಿನ ಸಮಸ್ಯೆ ನಿವಾರಣೆಗಾಗಿ ಪ್ರತಿ ವಾರ್ಡಿಗೆ ಕನಿಷ್‌ಠ ನಾಲ್ಕು ಹೊಸ ಕೊಳವೆ ಬಾವಿಗಳನ್ನು ಕೊರೆಸಬೇಕು, ಬೀದಿ ದೀಪಗಳ ದುರಸ್ತಿ, ಎರಡನೇ ಹಂತದ ನಗರೋತ್ಥಾನ ಕಾಮಗಾರಿ ಬಾಕಿ ಇರುವ ವಾರ್ಡುಗಳಲ್ಲಿ ಕೈಗೊತ್ತಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಗರಸಭೆ ಸದಸ್ಯರು ಅನೇಕ ಸಾರಿ ಒತ್ತಾಯಿಸಿ ಮೂರು ದಿನಗಳ ಹಿಂದೆ ನಗರಸಭೆ
ಮುಂದೆ ಜೋರು ಪ್ರತಿಭಟನೆ ನಡೆಸಿದ್ದ ಹಿನ್ನಲೆಯಲ್ಲಿ ಪೌರಾಯುಕ್ತರು ಸದಸ್ಯರೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಪಟ್ಟಿ ಮಾಡಿದರು.
ಈ ಸಭೆಗೆ ಜಿಲ್ಲಾಧಿಕಾರಿಗಳು ಬರಬೇಕಾಗಿತ್ತಾದರೂ ಕೆಲಸದ ಒತ್ತಡ ಹಾಗೂ ಪೌರಾಯುಕ್ತರಿಂದ ಸಮಗ್ರ ವರದಿ ಪಡೆದು ನಂತರ ಪರಿಹಾರ ರೂಪಿಸಬೇಕೆಂಬ ಉದ್ದೇಶದಿಂದ ಜಿಲ್ಲಾಧಿಕಾರಿ ಡಿ.ಕೆ.ರವಿ ಸಭೆಗೆ ಬಂದಿರಲಿಲ್ಲ. ಪೌರಾಯುಕ್ತ ಜಗದೀಶ್, ಕಾರ್ಯಪಾಲಕ ಇಂಜನಿಯರ್ ಗರುಡಾಚಾಲಮೂರ್ತಿ, ಎಇಇ ಕೊಟ್ರೇಶ್, ಸಹಯಾಕ ಇಂಜನಿಯರ್ ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ರಮೇಶ್, ವ್ಯವಸ್ಥಾಪಕ ಶಿವಕುಮಾರ್ ಹಾಗೂ ಕಂದಾಯ ನಿರೀಕ್ಷಕ ಚಲಪತಿ ಸಮ್ಮುಖದಲ್ಲಿ ಸದಸ್ಯರು ತಮ್ಮ ವಾರ್ಡು ಸಮಸ್ಯೆ ತಿಳಿಸಿದರು.
ಬಹುತೇಕ ಸದಸ್ಯರು ನೀರು, ಸ್ವಚ್ಛತೆ, ಬೀದಿ ದೀಪ, ಎರಡನೇ ಹಂತದ ನಗರೋತ್ಥಾನ ಕಾಮಗಾರಿ ಬಗ್ಗೆ ಮಾತನಾಡಿದರು.
ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ವಿಧಿ ಇಲ್ಲದೆ ಜಿಲ್ಲಾಧಿಕಾರಿಗಳ ಬಳಿ ನಮ್ಮ ಕಷ್ಟ ಕೇಳಿಕೊಳ್ಳಬೇಕಾಗುತ್ತದೆ, ಇದಕ್ಕೆ ನಗರಸಭೆಯ ಕೆಲ ಸಿಬ್ಬಂದಿ ಅಕ್ಷೇಪ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಸದಸ್ಯರು ಏನಾದ್ರು ಸಲಹೆ ನೀಡಿದರೆ ಅದು ಕಾರ್ಯಗತವಾಗುವುದಕ್ಕೆ ಅಧಿಕಾರಿಗಳು ಸ್ಪಂಧಿಸಬೇಕು, ಇಲ್ಲದಿದ್ದರೆ ಸಭೆಗಳು ಅರ್ಥಹೀನವಾಗುತ್ತದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು. ನಗರದಲ್ಲಿ ನೀರಿನ ಸಮಸ್ಯೆಗೆ ಅಕ್ರಮ ನಲ್ಲಿ ಸಂಪರ್ಕಗಳು ಸಹ ಪ್ರಮುಖ ಕಾರಣವಾಗಿದೆ, ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಅಕ್ರಮ ಸಂಪರ್ಕಗಳನ್ನು ತೆರವುಗೊಳಿಸಬೇಕೆಂದು 12ನೇ ವಾರ್ಡಿನ ಸದಸ್ಯ ರವೀಂದ್ರ ತಿಳಿಸಿದರೆ, 11ನೇ ವಾರ್ಡಿನ ಸುಕುಮಾರ್, ಎಸ್‌ಎನ್‌ಆರ್ ಆಸ್ಪತ್ರೆಯಿಂದ ಇಟಿಸಿಎಂ ಆಸ್ಪತ್ರೆಯ ತೆರುವಿನವರೆಗೆ ಬೀದಿ ದೀಪ ಅಳವಡಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಎಇಇ ಕೊಟ್ರೇಶ್, ಬೀದಿ ದೀಪಗಳ ಅಳವಡಿಕೆಗೆ ಟೆಂಡರ್ ಆಗಿದೆ, ನಾಳೆಯಿಂದಲೇ ಕೆಲಸ ಆರಂಭವಾಗಲಿದೆ, ಇನ್ನುಳಿದ ಕಡೆ ಶಿವರಾತ್ರಿಯ ನಂತರ ಕೆಲಸ ಆರಂಭಿಸಲಾಗುತ್ತದೆ, ಅಂತರಗಂಗೆ ರಸ್ತೆಯಿಂದ ಅಂತರಗಂಗೆ ಬೆಟ್ಟದ ತಪ್ಪಿಲಿನವರೆಗೆ ಶಿವರಾತ್ರಿ ಪ್ರಯುಕ್ತ ಬೀದಿ ದೀಪ ಅಳವಡಿಸಲಾಗುತ್ತಿದೆ ಎಂದು ವಿವರಿಸಿದರು.
23ನೇ ವಾರ್ಡಿನ ಮಹಿಳಾ ಸದಸ್ಯೆ ಸುಜಾತ ಪರವಾಗಿ ಸಭೆಗೆ ಬಂದಿದ್ದ ಪತಿ ನಾರಾಯಣಸ್ವಾಮಿ, ವಾರ್ಡಿಗೆ ಸೇರಿದ ಉಪ್ಪಾರಪೇಟೆಯಲ್ಲಿ ಕಳೆದ 10 ವರ್ಷಗಳಿಂದ ನೀರಿನ ವ್ಯವಸ್ಥೆ ಸರಿಯಿಲ್ಲ, ಕಿಲಾರಪೇಟೆಯಲ್ಲಿ ನಗರಸಭೆ ನೀರು ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.
14ನೇ ವಾರ್ಡಿನ ಮುರಳಿಗೌಡ, ನಗರೋತ್ಥಾನ ಕಾಮಗಾರಿಗಳ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ, ನೀರಿನ ಸಮಸ್ಯೆ ನಿವಾರಣೆ ಮಾಡಲು ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದರು.  ಸದಸ್ಯರ ಎಲ್ಲ ಸಮಸ್ಯೆಗಳನ್ನು ಅಲಿಸಿದ ಪೌರಾಯುಕ್ತ ಜಗದೀಶ್, ಜಿಲ್ಲಾಧಿಕಾರಿಗಳೊಂದಿಗೆ ಚಿರ್ಚಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಸಭೆ ಮುಕ್ತಾಯಗೊಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement