ಗಾಯಕಿ ಕೊಲೆಗೈದ ಪತಿ ಬಂಧನ
ಕೋಲಾರ: ಆರ್ಕೆಸ್ಟ್ರಾ ಹಾಡುಗಾರ್ತಿ ಸುನೀತಾ ನಿಗೂಢ ಕೊಲೆ ಪ್ರಕರಣವನ್ನು 48 ಗಂಟೆ ಅವಧಿಯಲ್ಲಿ ಭೇದಿಸುವ ಮೂಲಕ ಆಕೆಯ ಎರಡನೇ ಪತಿ ಮಂಜುನಾಥ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಕೋಲಾರ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆಗೆ ಪತ್ನಿಯ ಶೀಲದ ಮೇಲಿನ ಅನುಮಾನವೇ ಕಾರಣವೆಂದು ಪೊಲೀಸ್ ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಆರ್ಕೆಸ್ಟ್ರಾದಲ್ಲಿ ಹಾಡುಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ವೀರಾಂಜನೇಯ ನಗರದ ವಾಸಿ ಸುನೀತಾಳನ್ನು ಜಾಲಿಯಾಗಿ ಸುತ್ತಾಡಿಕೊಂಡು ಬರುವ ನೆಪದಲ್ಲಿ ಮಾಲೂರಿನಿಂದ ಭಾನುವಾರ ಸಂಜೆ ಬೈಕಿನಲ್ಲಿ ಕೂರಿಸಿಕೊಂಡು ಕೋಲಾರ ತಾಲೂಕಿನ ಭಟ್ರಹಳ್ಳಿ ಸಮೀಪದ ತೋಪಿಗೆ ಕರೆದುಕೊಂಡು ಹೋಗಿ ತೋಪಿನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ಶವದೊಂದಿಗೆ ಕೆಲವು ಗಂಟೆಗಳ ಕಾಲ ಕಳೆದು ಮಧ್ಯರಾತ್ರಿ ಶವವನ್ನು ಬೈಕಿನಲ್ಲಿ ಹಿಂದೆ ಹಾಕಿಕೊಂಡು ನಗರಕ್ಕೆ ಬಂದು ವೀರಾಂಜನೇಯನಗರದ ಬಳಿಯ ಸ್ಮಶಾನದ ಬಳಿ ಇಳಿಸಿ ಶವದ ಮೇಲೆ ಶಾಲು ಹೊದಿಸಿ ಆರೋಪಿ ಪರಾರಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಮಾಲೂರು ಪಟ್ಟಣದ ಪಟಾಲಮ್ಮ ಬೀದಿ ವಾಸಿ, ಬೆಂಗಳೂರಿನಲ್ಲಿ ಖಾಸಗಿ ಟ್ರಾವೆಲ್ಸ್ ಕಂಪನಿ ಉದ್ಯೋಗಿ ಮಂಜುನಾಥ ಬಂಧಿತ ಆರೋಪಿಯಾಗಿದ್ದು, ಈತ ಸುನೀತಳ ಎರಡನೇ ಪತಿ. ಶನಿವಾರ ರಾತ್ರಿ ಚಿಂತಾಮಣಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸಪ್ತಸ್ವರ ಆರ್ಕೆಸ್ಟ್ರಾ ಹಾಡುಗಾರ್ತಿಯಾಗಿ ಭಾಗವಹಿಸಿದ್ದ ಸುನೀತಾ, ಕಾರ್ಯಕ್ರಮ ಮುಗಿದ ನಂತರ, ಆರ್ಕೆಸ್ಟ್ರಾ ಮಾಲೀಕ ನಾಗರಾಜ ಎಂಬಾತನೊಂದಿಗೆ ಇದ್ದಿದ್ದನ್ನು ಪತಿ ಮಂಜುನಾಥ್ ಕಂಡಿದ್ದನಲ್ಲದೆ, ಅಲ್ಲಿ ಇಬ್ಬರ ನಡುವೆ ಸ್ವಲ್ಪ ಜಗಳ ನಡೆಯಿತಾದರೂ ಸಮಾಧಾನಗೊಂಡ ಮಂಜುನಾಥ್, ಶನಿವಾರ ಮಧ್ಯರಾತ್ರಿಯೇ ಬೈಕ್ನಲ್ಲಿ ಮಾಲೂರಿನ ಮನೆಗೆ ಕರೆತಂದಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಆಕೆಗೆ ನಡವಳಿಕೆ ಬದಲಿಸಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದು ಅದರಂತೆ ಬೇಜಾರು ಕಳೆಯಲು ಭಾನುವಾರ ಸಂಜೆ ಇಬ್ಬರೂ ಜೊತೆಗೂಡಿ ಹೊರಬಂದಾಗ ತಾಲೂಕಿನ ಭಟ್ರಹಳ್ಳಿಯಲ್ಲಿ ಈಕೆಯ ಜೀವ ತೆಗೆದಿದ್ದಾನೆ.
ಸೋಮವಾರ ಬೆಳಗ್ಗೆ ಸುನೀತಾ ಕೊಲೆ ಪ್ರಕರಣ ಬೆಳಕಿಗೆ ಬಂದು ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಂತೆ ನಗರ ವೃತ್ತ ನಿರೀಕ್ಷಕ ಪಿ.ಶಿವಕುಮಾರ್ ತನಿಖೆ ಕೈಗೊಂಡು ಪ್ರಕರಣದ ಪತ್ತೆಗೆ ಅಪರಾಧ ವಿಭಾಗದ ಪೊಲೀಸರ ತಂಡವನ್ನು ರಚಿಸಿದ್ದರು. ಈ ಮೊದಲು ಸುನೀತಾ ಬಿಎಂಟಿಸಿ ಚಾಲಕನೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದು, ನಂತರ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ನ್ಯಾಯಾಲಯದಲ್ಲಿ ವಿಚ್ಚೇದನ ಪಡೆಯಲಾಗಿತ್ತು. ಒಂದು ಮಗುವಿನ ತಾಯಿಯಾಗಿರುವ ಈಕೆ ತದನಂತರ ಮಂಜುನಾಥನನ್ನು ಎರಡನೇ ಮದುವೆಯಾಗಿ ಜೀವನ ಮಾಡುತ್ತಿದ್ದಳು. ಬಂಧಿತ ಪತಿ ಮಂಜುನಾಥ್ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.