ಪದವಿ ಪರೀಕ್ಷೆ ಶುಲ್ಕ ಏರಿಕೆ ಖಂಡಿಸಿ ಎಸ್‌ಎಫ್‌ಐ ಧರಣಿ
ಕೋಲಾರ: ಬೆಂಗಳೂರು ವಿವಿ ವ್ಯಾಪ್ತಿಯ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಪರೀಕ್ಷಾ ಶುಲ್ಕವನ್ನು ಏಕಾಏಕಿ ಏರಿಕೆ ಮಾಡಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ ಎಂದು ಆರೋಪಿಸಿ ಎಸ್‌ಎಫ್‌ಐ ಬುಧವಾರ ಪ್ರತಿಭಟನೆ ನಡೆಸಿತು.
ಸಂಘಟನೆಯ ಮುಖಂಡರು, ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಪರೀಕ್ಷಾ ಶುಲ್ಕ ಹೆಚ್ಚಳ ಆದೇಶ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.
2013-14ನೇ ಸಾಲಿನ ಪದವಿ ವಿದ್ಯಾರ್ಥಿಗಳಿಗೆ 2, 4 ಹಾಗೂ 6ನೇ ಸೆಮಿಸ್ಟರ್ ಪರೀಕ್ಷೆಗಳ ಪುನರಾವರ್ತಿತ ಶುಲ್ಕವನ್ನು ಕಳೆದ ವರ್ಷವಿದ್ದ 192 ರು. ಗಳಿಂದ 477 ರು.ಗಳಿಗೆ ಪರಿಷ್ಕೃತಗೊಳಿಸಲಾಗಿದೆ ಎಂದು ದೂರಿದ ಮುಖಂಡರು, ಈ ನಿರ್ಧಾರದಿಂದ ಜಿಲ್ಲೆಯ ಬಡ ದಲಿತ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದರಿಂದ ಕೂಡಲೇ ಆದೇಶ ವಾಪಸ್ ಪಡೆಯಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸದೆ ಪರೀಕ್ಷಾ ಶುಲ್ಕ ಏರಿಕೆ ಮಾಡಿರುವುದನ್ನು ಮುಖಂಡರು ಖಂಡಿಸಿದ್ದಾರೆ. ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಾಸುದೇವರೆಡ್ಡಿ, ತಾಲೂಕು ಅಧ್ಯಕ್ಷ ಮುಸ್ತಾಪ್, ಮುಖಂಡರಾದ ಗಂಗಾಧರ್, ನಾಗರಾಜ್, ಹೇಮಂತ್‌ಕುಮಾರ್, ರಾಂರಾಜು, ಹರೀಶ್, ಶ್ರೀನಾಥ್, ಸುಹಾಸ್, ರವಿಚಂದ್ರ, ಸಂಪತ್, ರಾಜೇಶ್, ಕಿರಣ್, ಕಿಶೋರ್ ಮತ್ತಿತರರು ಧರಣಿ ನೇತೃತ್ವ ವಹಿಸಿದ್ದರು.