ರಾಜ ಕಾಲುವೆ ಒತ್ತುವರಿ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಖಾತೆಗಳನ್ನು ಮಾಡಿರುವ ನಗರಸಭೆ ಆಯುಕ್ತರು ಹಾಗೂ ದ್ವಿತೀಯ ದರ್ಜೆ ಗುಮಾಸ್ತ ವಿರುದ್ಧ ಸಿಒಡಿ ಮತ್ತು ಲೋಕಾಯುಕ್ತ ತನಿಖೆ ಮಾಡಬೇಕೆಂದು ಒತ್ತಾಯಿಸಿ ನಗರಸಭೆ 3ನೇ ವಾರ್ಡ್ ನಿವಾಸಿಗಳು ಪ್ರತಿಭಟನೆ ನಡೆಸಿದರು.
ನಗರದ ನಗರಸಭೆಯ 1ನೇ ವಿಭಾಗದ ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಖಾತೆಗಳನ್ನು ನಗರಸಭಾ ಆಯುಕ್ತ ಹಾಗೂ ನಗರಸಭೆ ಕಂದಾಯ ವಿಭಾಗದ ಗುಮಾಸ್ತ ಎಸ್.ವೆಂಕಟೇಶ್ ನಿವೇಶನಗಳಿಗೆ ಖಾತೆಗಳನ್ನು ಮಾಡಿಕೊಟ್ಟು ಲಕ್ಷಾಂತರ ರುಪಾಯಿ ಲಂಚ ಪಡೆದು ಭ್ರಷ್ಟಾಚಾರ ಮಾಡಿದ್ದಾರೆ. ಈ ಇಬ್ಬರು ಅಧಿಕಾರಿಗಳ ವಿರುದ್ಧ ಸಿಒಡಿ ಮತ್ತು ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸುವಂತೆ ಮತ್ತು ಅಂತಹ ಅಕ್ರಮ ಖಾತೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ 3ನೇ ವಾರ್ಡ್ ನಗರಸಭೆ ಸದಸ್ಯರಾದ ಎನ್.ತುಳಸಿ ನೇತೃತ್ವದಲ್ಲಿ ನೂರಾರು ನಿವಾಸಿಗಳು ನಗರಸಭೆ ಕಾರ್ಯಾಲಯದ ಮುಂದೆ ಧರಣಿ ಕುಳಿತರು.
ನಂತರ ಮಾತನಾಡಿದ ಸದಸ್ಯೆ ಎನ್.ತುಳಸಿ, ನಗರದ ಸುತ್ತಮುತ್ತಲಿನ ಜಮೀನು ಆಸ್ತಿಗಳ ಬೆಲೆ ಗಗನಕ್ಕೇರಿರುತ್ತಿದೆ. ಇದನ್ನು ದುರುಪಯೋಗಪಡಿಸಿಕೊಂಡು ನಗರಸಭೆ ಆಯುಕ್ತರು ಮತ್ತು ದ್ವಿತೀಯ ದರ್ಜೆ ಗುಮಾಸ್ತ ಭ್ರಷ್ಟಾಚಾರಕ್ಕೆ ಒತ್ತು ನೀಡಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು. ಬಡಜನರಿಗೆ ಅನ್ಯಾಯ ಮಾಡಿ ಕಾನೂನುಬಾಹಿರವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಇವರ ವಿರುದ್ಧ ಇಲಾಖೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ಅಮಾನತುಗೊಳಿಸಲು ಒತ್ತಾಯಿಸಿದರು.
ದೇವಮ್ಮ, ಆಂಜಮ್ಮ, ರವಿ, ಮಂಜು, ತುಳಿಸಮ್ಮ, ನರಸಿಂಹಪ್ಪ, ಮಂಜುನಾಥ್ ಸೇರಿದಂತೆ ಇನ್ನೂ ನೂರಾರು ನಿವಾಸಿಗಳು ಧರಣಿಯಲ್ಲಿ ಭಾಗವಹಿಸಿದ್ದರು