ಲೋಕಾಯುಕ್ತ ಕುಂದು-ಕೊರತೆ ಆಲಿಕೆ ಸಭೆ
ಚಿಂತಾಮಣಿ: ಗ್ರಾಮೀಣ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಅಧಿಕಾರಿ ಮಂಜೇಗೌಡ ಸೂಚಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಕೆ ಸಭೆಯಲ್ಲಿ ಅವಹಾಲು ಸ್ವೀಕರಿಸಿ ಅವರು ಮಾತನಾಡಿದರು. ಹಳ್ಳಿ ಜನರ ಸಮಸ್ಯೆಗಳಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿ ಕಂದಾಯ ಅಧಿಕಾರಿಗಳು ಸೇರಿದಂತೆ ಇನ್ನೂ ಹಲವು ಅಧಿಕಾರಿಗಳು ಗ್ರಾಪಂ ವ್ಯಾಪ್ತಿಗಳಲ್ಲಿ ಜನರನ್ನು ಪರದಾಡಿಸದೆ ಜರೂರಾಗಿ ಕೆಲಸಗಳನ್ನು ಮಾಡಿಕೊಡಬೇಕೆಂದು ಲೋಕಾಯುಕ್ತ ಅಧಿಕಾರಿ ಮಂಜೇಗೌಡ ತಾಕೀತು ಮಾಡಿದರು.
ತಾಪಂ ನಿರ್ವಹಣಾಧಿಕಾರಿ ವಸಂತ್‌ಕುಮಾರ್ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು ಚಾಚು ತಪ್ಪದೆ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು. ನಗರಸಭೆ, ತಾಪಂ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿ ಹಲವಾರು ಅರ್ಜಿಗಳನ್ನು ಲೋಕಾಯುಕ್ತ ಅಧಿಕಾರಿಗಳ ಸಮಕ್ಷಮದಲ್ಲಿ ಮನವಿ ಪತ್ರ ಸಲ್ಲಿಸಿದರು.
ಮತದಾನ ಜಾಗೃತಿ: ಎಬಿವಿಪಿ ಬೈಕ್ ರ್ಯಾಲಿ
ಕೋಲಾರ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ವಿಷನ್ -2020ರ ಸಾಕಾರಕ್ಕೆ ಅನುಭವಿ ಸಮರ್ಥ ಪ್ರಧಾನಿ ಬೇಕಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನಕ್ಕೆ ಯುವಕರಲ್ಲಿ ಜಾಗೃತಿ ಮೂಡಿಸಲು ಬುಧವಾರ ಎಬಿವಿಪಿಯಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಯಿತು. ನಗರದ ಪ್ರವಾಸಿ ಮಂದಿರದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಎಬಿವಿಪಿ ಕಾರ್ಯಕರ್ತರು ಸ್ಥಿರ ಸರ್ಕಾರಕ್ಕೆ ಹಾಗೂ ದೇಶದ ಜ್ವಲಂತ ಸಮಸ್ಯೆ ಬಗೆಹರಿಸಲು ಸಮರ್ಥ ನಾಯಕತ್ವ ಬೇಕಾಗಿರುವುದರಿಂದ ಯುವಕರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಘೋಷಣೆಗಳನ್ನು ಕುಗಿದರಲ್ಲದೆ, ಜನತೆಯಲ್ಲಿ ಜಾಗೃತಿ ಮೂಡಿಸಲು ಕರಪತ್ರ ವಿತರಿಸಿದರು. ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ನಗರ ಕಾರ್ಯದರ್ಶಿ ಹರೀಶ್, ಪದಾಧಿಕಾರಿಗಳಾದ ಗೌತಮ್, ಬಸವರಾಜು, ಸುರೇಶ್, ಅಶೋಕ್, ರೌಹಿತ್, ಶ್ರೀನಿವಾಸ್ ಮತ್ತಿತರರು ರ್ಯಾಲಿ ನೇತೃತ್ವ ವಹಿಸಿದ್ದರು.