ವೈಕಲ್ಯ ದೇಹಕ್ಕಷ್ಟೆ, ಮನಸ್ಸಿಗಲ್ಲ: ನಾರಾಯಣಸ್ವಾಮಿ
ಶಿಡ್ಲಘಟ್ಟ: ಅಂಗವೈಕಲ್ಯ ದೇಹಕ್ಕೆ ಹೊರತು ಮನಸ್ಸಿಗಲ್ಲ. ಇದನ್ನು ಅರಿತುಕೊಂಡು ಸಾಧನೆ ತೋರಬೇಕೆಂದು ತಹಸೀಲ್ದಾರ್ ನಾರಾಯಣಸ್ವಾಮಿ ಎಂದು ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಆಶಾ ಕಿರಣ ಆಂಧ ಮಕ್ಕಳ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಅಂಗವಿಕಲರಿಗೆ ಅನುಕಂಪಕ್ಕಿಂತಲೂ ಅವಕಾಶವನ್ನು ನೀಡಬೇಕಾಗಿದ್ದು ಅವರಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯಬೇಕೆಂದರು.
ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ಶಾಂತರಸ್, ಇಲಾಖೆಯಿಂದ ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ತಾಲೂಕು ವೈದ್ಯಾಧಿಕಾರಿ ಅನಿಲ್ ಕುಮಾರ್ ಮಾತನಾಡಿದರು.
ಅಂಧ ಮಕ್ಕಳು ಮೂಢನಂಬಿಕೆ ಬಗ್ಗೆ ನಡೆಸಿಕೊಟ್ಟ 'ಜಾಗೃತಿ' ಸಾಮಾಜಿಕ ನಾಟಕ ಗಮನ ಸೆಳೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ ರೆಡ್ಡಿ, ಸಂಸ್ಥೆ ಕಾರ್ಯದರ್ಶಿ ಪಿ.ಎಂ.ನಾಗರಾಜ್ ಮುಂತಾದವರು ಇದ್ದರು.