ಶಿವಾಜಿ ಜಯಂತಿ ಸರ್ಕಾರಿ ಹಬ್ಬವಾಗಲಿ'
ಮಾಲೂರು: ಛತ್ರಪತಿ ಶಿವಾಜಿ ಜಯಂತಿಯನ್ನು ಸರ್ಕಾರಿ ಹಬ್ಬವನ್ನಾಗಿ ಆಚರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಯನ್ನು ಶೀಘ್ರವಾಗಿ ಪುರಸ್ಕರಿಸಬೇಕಾಗಿ ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತಿರುವುದಾಗಿ ಕೆಕೆಎಂಪಿ ರಾಜ್ಯಾಧ್ಯಕ್ಷ ವಿ.ಎ.ರಾಣೋಜಿರಾವ್ ಹೇಳಿದರು.
ಪಟ್ಟಣದ ಕುಂಭೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕ್ಷತ್ರೀಯ ಪರಿಷತ್ ವಿದ್ಯಾಸಂಸ್ಥೆ ಆಯೋಜಿಸಿದ್ದ 387ನೇ ಶಿವಾಜಿ ಜಯಂತಿ ಹಾಗೂ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಛತ್ರಪತಿ ಶಿವಾಜಿ ಒಂದು ಜನಾಂಗಕ್ಕೆ, ಒಂದು ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ.ಅವರು ಸಾಹಸ-ದೇಶ ಭಕ್ತಿ ಇಡೀ ದೇಶಕ್ಕೆ ಮಾದರಿ. ಈ ನಿಟ್ಟಿನಲ್ಲಿ ಅವರ ಜಯಂತಿಯನ್ನು ಇತರೆ ಮಹನೀಯರ ಜಯಂತಿಯಂತೆ ಸರ್ಕಾರವು ಆಯೋಜಿಸುವ ಜತೆಯಲ್ಲಿ ಆ ದಿನವನ್ನು ರಜೆಯ ದಿನವಾಗಿ ಘೋಷಿಸಬೇಕೆಂದು ಒತ್ತಾಯಿಸಿದರು. ಬಾಪೂಜಿ ವಿದ್ಯಾ ಸಂಸ್ಥೆ ಎಂ.ವಿ.ಹನುಮಂತಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚೆನ್ನರಾಯಪ್ಪ, ರಘುನಾಥ್, ಜೆ.ಕೆ.ಮುನಿಯಪ್ಪ ಮತ್ತಿತರರು ಮಾತನಾಡಿದರು. ಇದೇ ವೇಳೆ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಗಣ್ಯರಿಗೆ ಸನ್ಮಾನಿಸಲಾಯಿತು. ಕೆ.ಕೆ.ಎಂ.ಪಿ.ರಾಜ್ಯ ಕಾರ್ಯದರ್ಶಿ ಶಿವಾಜಿರಾವ್ ಜಾಧವ್ ಮತ್ತಿತರರು ಇದ್ದರು.